ಭಟ್ಕಳ: ಆಸರಕೇರಿಯ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಶ್ರೀನಿವಾಸ ಕಲ್ಯಾಣೋತ್ಸವವೂ ಅತ್ಯಂತ ಶ್ರದ್ಧಾ ಭಕ್ತಿಯಿಂದ ಜರುಗಿತು.
ದೇವಸ್ಥಾನದ ಎದುರಿನ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಹಿಸಿದ್ದರು. ತಂತ್ರಿಗಳಾದ ವೇದಮೂರ್ತಿ ಡಿ.ವಿ, ಕೃಷ್ಣ ಭಟ್ಟ ಬೆಂಗಳೂರು, ಪ್ರಧಾನ ಅರ್ಚಕ ವೇ.ಮೂ. ಮುರಳೀಧರ ಆರ್. ನೇತೃತ್ವದಲ್ಲಿ ಆರಂಭವಾದ ಕಲ್ಯಾಣೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಶ್ರೀನಿವಾಸ ಕಲ್ಯಾಣೋತ್ಸವದ ಪೂರ್ವದಲ್ಲಿ ನಾಮಧಾರಿ ಸಮಾಜದ 100ಕ್ಕೂ ಅಧಿಕ ದಂಪತಿಗಳು ಪ್ರಧಾನ ಅರ್ಚಕರ ಮಾರ್ಗದರ್ಶನದಲ್ಲಿ ರಾಜಾರ್ಶೀವಾದದ ಸಂಕಲ್ಪಿತ ಪೂಜೆಯನ್ನು ಸಲ್ಲಿಸಿದರು. ಕಲ್ಯಾಣೋತ್ಸವದ ನಂತರ ತೀರ್ಥಪ್ರಸಾದ ವಿತರಣೆ ಹಾಗೂ ಅನ್ನ ಸಂತಪರ್ಪಣೆ ನಡೆಯಿತು. ಸಂಜೆ 6 ಗಂಟೆಯಿಂದ ಸ್ಥಳೀಯರು ನಡೆಸಿಕೊಟ್ಟ ಹರಿಸೇವಾ ಕುಣಿತ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ರಾತ್ರಿ 8 ಗಂಟೆಗೆ ಶ್ರೀ ಪದ್ಮಾವತಿ ಅಮ್ಮನವರ ಪಲ್ಲಕ್ಕಿ ಆಗಮಿಸಿ ಪೂಜಿಸಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಡಿ.ಬಿ.ನಾಯ್ಕ, ಅಧ್ಯಕ್ಷ ಎಂ.ಆರ್.ನಾಯ್ಕ, ಉಪಾಧ್ಯಕ್ಷ ಮೋಹನ ನಾಯ್ಕ, ಕಾರ್ಯದರ್ಶಿ ರಾಜೇಶ ನಾಯ್ಕ, ರಾಮಕ್ಷೇತ್ರದ ಟ್ರಸ್ಟಿ ಬಾಬು ಮಾಸ್ತರ, ಮಾಜಿ ಅಧ್ಯಕ್ಷ ಎಲ್.ಎಸ್. ನಾಯ್ಕ, ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಜೆ. ಡಿ. ನಾಯ್ಕ, ಸತೀಶಕುಮಾರ್ ನಾಯ್ಕ, ಮಂಜುನಾಥ ನಾಯ್ಕ, ಕೆ.ಆರ್.ನಾಯ್ಕ, ಶ್ರೀಧರ ನಾಯ್ಕ ಹೆಬಳೆ, ಗೋವಿಂದ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ರಾಜೇಶ ನಾಯ್ಕ ಮುಂಡಳ್ಳಿ ಸೇರಿದಂತೆ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಫೆ.1 ಶನಿವಾರ ಬೆಳಿಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿ ದೇವರಿಗೆ ತುಲಾಭಾರ ಸಮರ್ಪಣೆ ನಡೆಯಲಿದೆ. ನಂತರ 10.30 ರಿಂದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾ ಮಂಗಳಾರತಿ, ಅನ್ನ ಸಂತರ್ಪಣೆ, ಸಂಜೆ 5 ಗಂಟೆಯಿಂದ ದೇವರ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ 12 ಗಂಟೆಗೆ ಮಹಾ ಮಂಗಳಾರತಿ, ವೇದಾದಿ ಶಾತ್ತುಮೊರೈ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದ್ದು, ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.