ಭಟ್ಕಳ: ಮಹತೋಬಾರ ಶ್ರೀ ಮುರ್ಡೇಶ್ವರ ದೇವರ ಜಾತ್ರೆ (ರಥೋತ್ಸವ) ನಡೆಯಲಿದೆ. ಜಾತ್ರೆ ಪ್ರಯುಕ್ತ ಪ್ರವಾಸಿಗರ ವಾಹನ ನಿಲ್ಲಿಸುವ ಜಾಗದಲ್ಲಿ ತಾತ್ಕಾಲಿಕ ಮೂಲಸೌಕರ್ಯ ಒದಗಿಸುವ ಕುರಿತು ಸಾರ್ವಜನಿಕರು ಮಾವಳ್ಳಿ-1 ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಪಿಡಿಒಗೆ ಮನವಿ ಸಲ್ಲಿಸಿದರು.
ವಿಶ್ವ ಪ್ರಸಿದ್ಧ ಪ್ರವಾಸಿಗರ ನೆಚ್ಚಿನ ಕ್ಷೇತ್ರ ಮಹತೋಬಾರ ಶ್ರೀ ಮುರ್ಡೇಶ್ವರ ದೇವರ ಜಾತ್ರೆ ಪ್ರತಿ ವರ್ಷದಂತೆ ನಡೆಯಲಿದೆ. ಬರುವ ಜನವರಿ 20 ರಂದು ನಡೆಯುವ ಜಾತ್ರೆಯ ಪ್ರಯುಕ್ತ ಗ್ರಾಮ ಪಂಚಾಯತ್ ವತಿಯಿಂದ ಅಂಗಡಿ ಮುಂಗಟ್ಟುಗಳಿಗೆ ಮತ್ತು ಪ್ರವಾಸಿಗರ ವಾಹನ ನಿಲ್ಲಿಸಲು ಪಾರ್ಕಿಂಗ್ ಟೆಂಡರ್ ಕರೆಯಲಾಗುತ್ತದೆ. ಇದರಿಂದ ಗ್ರಾಮ ಪಂಚಾಯತ್‌ಗೆ ಲಕ್ಷಾಂತರ ರೂ. ಆದಾಯ ಬರುತ್ತದೆ.
ಆದರೆ, ಈ ಹಿಂದೆಯೂ ಜಾತ್ರೆ ನಡೆದಾಗ ಪಾರ್ಕಿಂಗ್ ಜಾಗದಲ್ಲಿ ಪ್ರವಾಸಿಗರಿಗೆ ಯಾವುದೇ ತೆರನಾದ ತಾತ್ಕಾಲಿಕ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಈ ಬಾರಿ ಹಾಗೆ ಮಾಡದೇ ಪಾರ್ಕಿಂಗ್ ಜಾಗದಲ್ಲಿ ಸರಿಯಾದ ಮೂಲಸೌಕರ್ಯಗಳನ್ನು ಒದಗಿಸಿ ಜಾತ್ರೆಗೆ ಬರುವವರಿಗೆ ಅನೂಕೂಲ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಮನವಿಯನ್ನು ಮಾವಳ್ಳಿ-1 ಗ್ರಾಮ ಪಂಚಾಯತ್ ಪಿಡಿಒ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಧರ ನಾಯ್ಕ, ಹನುಮಂತ, ನಾಗರಾಜ ಪಟಗಾರ, ಲಕ್ಷ್ಮಣ ನಾಯ್ಕ ಸೇರಿದಂತೆ ಮುಂತಾದವರು ಇದ್ದರು.