ಶಿರಸಿ : ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ತರ ಪಾತ್ರ ವಹಿಸಿರುವ ಅನರ್ಹ ಶಾಸಕರ ಕ್ಷೇತ್ರಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಸುಮಾರು 23 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಯಾಗಿದೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಬಿಜೆಪಿ ಸರ್ಕಾರ ರಚನೆಯಾಗಿದೆ. ಇದರಿಂದ ಅವರ ಋಣ ತೀರಿಸಲು ಸರ್ಕಾರ ಹೆಚ್ಚಿನ ಅನುದಾನ ನೀಡಿದೆ ಎನ್ನಲಾಗುತ್ತಿದೆ. ಅಲ್ಲದೇ ಮುಂದಿನ ಉಪ ಚುನಾವಣೆ ತಯಾರಿಯೂ ಇದಾಗಿದ್ದು, ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಮೀಸಲು ಇಡಲಾಗಿದೆ.
23 ಕೋಟಿ !
ಮೊದಲ ಹಂತದಲ್ಲಿ ಜಿಲ್ಲಾ ಪಂಚಾಯತ್ ರಸ್ತೆಗಳಿಗೆ 8.85 ಕೋಟಿ ರೂ. ಹಾಗೂ ಎರಡನೇ ಹಂತದಲ್ಲಿ ಲೋಕೋಪಯೋಗಿ ಇಲಾಖೆಗೆ 14.15 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬನವಾಸಿ ವಲಯದ 6 ಕಾಮಗಾರಿಗೆ 6.90 ಕೋಟಿ ರೂ. ಹಾಗೂ ಯಲ್ಲಾಪುರದ 9 ಕಾಮಗಾರಿಗೆ 7.25ಕೋಟಿ ರೂ. ಮೀಸಲು ಇಡಲಾಗಿದೆ. ಇನ್ನು, ಕಳೆದ ವಾರವಷ್ಟೇ ಜಿಪಂ ರಸ್ತೆಗೆ 8.85 ಕೋಟಿ ನೀಡಿ, ಟೆಂಡರ್ ಹಂತಕ್ಕೆ ಬಂದಿದ್ದು, ಲೋಕೋಪಯೋಗಿ ಇಲಾಖೆಯ ಅನುದಾನಗಳಿಗೂ ಚುನಾವಣೆಯೊಳಗೆ ಟೆಂಡರ್ ಕರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜಕೀಯ ಲಾಭ:
ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚುವಂತೆ ಮಾಡಿ, ಸರ್ಕಾರ ಕೆಡವುದರಲ್ಲಿ ಮಹತ್ತರ ಪಾತ್ರ ವಹಿಸಿರುವ ಹೆಬ್ಬಾರ್ ಅವರನ್ನು ಸೋಲಿಸಲು ಹಿರಿಯ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಸೇರಿದಂತೆ ಇತರ ಮುಖಂಡರು ಸೋಲಿಸಲು ಸಿದ್ದತೆ ನಡೆಸುತ್ತಿದ್ದಾರೆ. ಆದರೆ, ಹೆಬ್ಬಾರ್ ಸಿಎಂರನ್ನ ಹಿಡಿದು ಅಭಿವೃದ್ದಿಗೆ ಹಣ ತಂದು ಸವಾಲು ಹಾಕಿದ್ದಾರೆ. ಅಭಿವೃದ್ಧಿ ಹಣದಲ್ಲೂ ರಾಜಕೀಯದ ವಾಸನೆ ಬಡಿಯುತ್ತಿದ್ದರೂ ಕ್ಷೇತ್ರಕ್ಕೆ ಒಳಿತಾಗುತ್ತಿದೆ ಎನ್ನುವುದು ಸ್ಥಳೀಯರ ಮಾತಾಗಿದೆ.
ವಾಕ್ಸಮರ:
ಚುನಾವಣೆ ಸಂದರ್ಭದಲ್ಲಿಯೇ ಬಿಜೆಪಿ ಮತ್ತು ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿಗಳು ಎಂದೇ ಗುರುತಿಸಿಕೊಂಡಿರುವ ಹೆಬ್ಬಾರ್ ಹಾಗೂ ಭೀಮಣ್ಣ ನಡುವೆ ವಾಕ್ಸಮರ ಶುರುವಾಗಿದೆ. ಇದರಿಂದ ಯಲ್ಲಾಪುರ ಕ್ಷೇತ್ರದಲ್ಲಿ ಚುನಾವಣಾ ವೇದಿಕೆ ಸಜ್ಜಾದಂತೆ ಕಾಣುತ್ತಿದೆ. ಈಗ ಹೆಬ್ಬಾರ್ ರಾಜಕೀಯ ಪ್ರಭಾವ ಬಳಸಿಕೊಂಡು ಅಭಿವೃದ್ಧಿ ದಾಳ ಪ್ರಯೋಗಿಸಿದ್ದಾರೆ. ಆದರೆ, ಭೀಮಣ್ಣ ವಿರೋಧ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆಯಿದ್ದು, ಯಾವ ರೀತಿ ಹೆಬ್ಬಾರ್ನ್ನು ಎದುರಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.