ಕಾರವಾರ(ಉತ್ತರಕನ್ನಡ): ಕಳೆದ ವಾರ ಅಬ್ಬರಿಸಿದ ಅಕಾಲಿಕ ಮಳೆ ಸದ್ಯ ಕೊಂಚ ಬಿಡುವು ನೀಡಿದೆ. ಇನ್ನೇನು ಮಳೆಗಾಲ ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು ರೈತರು ಬಿತ್ತನೆ ಕಾರ್ಯಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೃಷಿ ಭೂಮಿಗಳಲ್ಲಿ ಸೈನಿಕ ಹುಳುಗಳ ಬಾಧೆ ಶುರುವಾಗಿದೆ.
ಕಾರವಾರದ ಕಡ್ನೀರು, ಹೊದ್ಕೆ ಶಿರೂರು, ತೊರಗೋಡು, ಬಾಸಳ್ಳಿ ಸೇರಿದಂತೆ ಸುತ್ತಲಿನ ಕೆಲ ಪ್ರದೇಶಗಳಲ್ಲಿ ಸೈನಿಕ ಹುಳುಗಳು ರೈತರಿಗೆ ತಲೆನೋವು ತಂದಿಟ್ಟಿವೆ. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಚಿಗುರಿಕೊಂಡಿರುವ ಹುಲ್ಲಿಗೆ ಸೈನಿಕ ಹುಳಗಳು ಲಗ್ಗೆಇಟ್ಟಿವೆ. ಅಪಾರ ಪ್ರಮಾಣದಲ್ಲಿ ವ್ಯಾಪಿಸಿಕೊಂಡಿರುವ ಈ ಹುಳಗಳು ಕೃಷಿ ಜಮೀನಿನಲ್ಲಿರುವ ಹುಲ್ಲು, ಸಸಿಗಳ ಎಲೆಗಳನ್ನು ತಿಂದುಹಾಕುತ್ತಿವೆ. ಸಸಿಗಳ ನಾಟಿ ಬಳಿಕವೂ ಇದೇ ರೀತಿ ಹುಳುಗಳು ದಾಳಿ ಮಾಡಿದರೆ ವರ್ಷದ ಕೂಳು ಕಳೆದುಕೊಳ್ಳುವ ಆತಂಕ ರೈತ ತಿಮ್ಮಪ್ಪ ನಾಯ್ಕ ಅವರದ್ದು.
ಕೆಲ ರೈತರು ತಮ್ಮ ಜಾನುವಾರುಗಳಿಗಾಗಿ ಬೆಳೆದ ಹುಲ್ಲು ಸಹ ಈ ಸೈನಿಕ ಹುಳುಗಳ ಪಾಲಾಗಿದೆ. ಈಗಾಗಲೇ ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆಯಲಾದ ಹುಲ್ಲಿನ ಮೇಲೆ ದಾಳಿ ನಡೆಸಿದ ಸೈನಿಕ ಹುಳುಗಳು ತಮ್ಮ ಸಂಖ್ಯೆಯನ್ನು ಸಹ ಹೆಚ್ಚಿಸಿಕೊಳ್ಳುತ್ತಿದ್ದು ಅವುಗಳ ನಿಯಂತ್ರಣಕ್ಕೆ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ರೈತರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಬೊಲೆರೋ ಡಿಕ್ಕಿ, ಶಿಕ್ಷಕ ದಂಪತಿ ಸಾವು
ಸೈನಿಕ ಹುಳುಗಳು ಪತ್ತೆಯಾದ ಪ್ರದೇಶಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೀಟಗಳಿಗೆ ವಿಷಪ್ರಾಶನ ಮಾಡಬೇಕಾದ ಅಗತ್ಯವಿದೆ. ಜೊತೆಗೆ ಸೋಲಾರ್ ಲೈಟ್ ಟ್ರಾಪ್‌ಗಳನ್ನು ಅಳವಡಿಸುವ ಮೂಲಕವೂ ನಿಯಂತ್ರಿಸಬಹುದು. ಈ ಬಗ್ಗೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.