ಶಿರಸಿ : ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ, ನೂರೈವತ್ತು ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ಶ್ರೀ ಮಾರಿಕಾಂಬಾ ಪ್ರೌಢಶಾಲೆ ಕೊಠಡಿಗಳಿಗೆ ಸಂಪೂರ್ಣ ಸೋಲಾರ್ ಬೆಳಕಿನ ವ್ಯವಸ್ಥೆ ಮಾಡಿದ್ದು, ವರ್ಷಾಂತ್ಯಕ್ಕೆ ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಉಳಿತಾಯ ಮಾಡಲಾಗಿದೆ.
ಈ ಶಾಲೆಯು ಶೈಕ್ಷಣಿಕ ಗುಣಮಟ್ಟದಲ್ಲಿ ಅಭಿವೃದ್ಧಿಯಾಗಿದ್ದು, ಇಲ್ಲಿಗೆ ಕಲಿಯಲು ಅಂತರ್ರಾಜ್ಯದಿಂದಲೂ ಮಕ್ಕಳು ಬರುತ್ತಾರೆ. ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆಯಾಗಿರುವ ನಗರದ ಮಾರಿಕಾಂಬಾ ಪ್ರೌಢಶಾಲೆಯು ತನ್ನ ಶೈಕ್ಷಣಿಕ ಗುಣಮಟ್ಟ, ಕಾಳಜಿ, ಸೌಲಭ್ಯಗಳ ಮೂಲಕವಾಗಿ ರಾಜ್ಯದ ಗಮನ ಸೆಳೆದಿದೆ. ರಾತ್ರಿ ಸಮಯದಲ್ಲಿ ವಿದ್ಯುತ್ ಕಡಿತವಾದಾಗ ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ಕಷ್ಟವಾಗುತ್ತಿತ್ತು. ಇದನ್ನು ಗಮನಿಸಿದ ಆಡಳಿತಾಧಿಕಾರಿಗಳು ಸೋಲಾರ್ ವ್ಯವಸ್ಥೆ ಕಲ್ಪಿಸುವುದಾಗಿ ಹೆಸ್ಕಾಂಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಹೆಸ್ಕಾಂ ಸಮ್ಮತಿ ಸೂಚಿಸಿದ್ದು, ಇದೀಗ ಆ ಶಾಲೆಯಲ್ಲಿ ವಿದ್ಯುತ್ ಕಡಿತವಾದರೂ ಸೋಲಾರ್ ಬೆಳಕಿನಲ್ಲಿ ಮಕ್ಕಳು ಓದಿಕೊಳ್ಳಬಹುದಾಗಿದೆ.
ಸೋಲಾರ್ ಅಳವಡಿಸಲು 10ಲಕ್ಷ ರೂ. ವೆಚ್ಚ
ಇಂಟಿಗ್ರೇಟೆಡ್ ಪವರ್ ಡೆವಲಪ್‌ಮೆಂಟ್ ಸ್ಕೀಮ್ ಸೇರಿದಂತೆ ವಿವಿಧ ಯೋಜನೆಯಡಿ ಸರ್ಕಾರಿ ಕಟ್ಟಡದಲ್ಲಿ ಯುನಿಟ್ ಸ್ಥಾಪಿಸಿ ಸೌರ ವಿದ್ಯುತ್ ಉತ್ಪಾದಿಸಿ ಆ ಕಟ್ಟಡಕ್ಕೆ ಬಳಕೆಯಾಗಿ ಹೆಚ್ಚುಳಿದ ವಿದ್ಯುತ್ತನ್ನು ಹೆಸ್ಕಾಂ ವಾಪಸ್ ಪಡೆಯುತ್ತದೆ. ಅದರಲ್ಲೂ ಹೊಸ ಕಟ್ಟಡ ಹಾಗೂ ಹೆಚ್ಚಿನ ಬಿಸಿಲು ಬೀಳುವ ಪ್ರದೇಶದಲ್ಲಿ ಇಂತಹ ಯೋಜನೆ ಕಾರ್ಯಗತಗೊಳ್ಳುತ್ತದೆ. 12ನೇ ಹಣಕಾಸು ಯೋಜನೆಯಡಿ ಕಾರ್ಯಗತಗೊಂಡಿರುವ ಈ ಸೋಲಾರ್ ಘಟಕ ನಿರ್ಮಾಣಕ್ಕೆ ಸುಮಾರು 10ಲಕ್ಷ ರೂ. ವೆಚ್ಚ ಮಾಡಲಾಗಿದೆ.
ವಿದ್ಯುತ್ ಬಿಲ್ ಉಳಿತಾಯ :
ಮಾರಿಕಾಂಬಾ ಪ್ರೌಢಶಾಲೆಯ ಹೊಸ ಕಟ್ಟಡದ ಟೆರೆಸ್ ಮೇಲೆ 10ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ ಘಟಕದಲ್ಲಿ ಸುಮಾರು 30 ಪ್ಯಾನಲ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ಪ್ಯಾನಲ್‌ನಲ್ಲಿ 350ಕ್ಕೂ ಹೆಚ್ಚು ವ್ಯಾಟ್ ಸೌರ ವಿದ್ಯುತ್‌ನಂತೆ ಒಟ್ಟು ಸುಮಾರು 40ಯುನಿಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಪ್ರೌಢಶಾಲೆಯ ಹಳೆಯ ಕಟ್ಟದಲ್ಲಿನ 25ಕೊಠಡಿಗಳು ಹಾಗೂ ಹೊಸ ಕಟ್ಟಡದ 23 ತರಗತಿಗಳ ಕೋಣೆಗಳಲ್ಲಿ ಸೋಲಾರ್ ದೀಪಗಳು ಉರಿಯಲಿದೆ. ಇಸರಿಂದ ವಾರ್ಷಿಕವಾಗಿ ಒಂದು ಲಕ್ಷದಷ್ಟು ಹಣ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.