ಶಿರಸಿ: ಮಠ, ಮಾನ್ಯಗಳು ಸಹಸ್ರಾರು ಭಕ್ತರಿಗೆ ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಿವೆ. ಮಠಗಳು ನಡೆಯೋ ದಾರಿ ಹಲವಾರು ಜನರ ಸ್ಫೂರ್ತಿ, ಅದರ್ಶಕ್ಕೆ ದಾರಿದೀಪಗಳಾಗಿವೆ. ಅದೇ ರೀತಿ ಹಲವಾರು ಅನುಯಾಯಿಗಳನ್ನು ಹೊಂದಿರುವ ಶಿರಸಿ ತಾಲೂಕಿನ ಸೋದೆ ವಾದಿರಾಜ ಮಠವು ಸಂಪೂರ್ಣ ಮಠಕ್ಕೆ ಸೋಲಾರ್ ಆಳವಡಿಕೆ ಮಾಡಿ, ನೈಸರ್ಗಿಕ ಶಕ್ತಿ ಬಳಕೆಗೆ ಭಕ್ತರಿಗೆ ಸ್ಫೂರ್ತಿಯಾಗಿದೆ.
ಗುರುಪೀಠದ ಮೂಲಕ ಭಕ್ತರಿಗೆ ಆಧ್ಯಾತ್ಮ ಶಿಕ್ಷಣ ನೀಡುತ್ತಿರೋ ಧಾರ್ಮಿಕ ಕೇಂದ್ರವೊಂದು ಇದೀಗ ಪರಿಸರಪೂರಕ ಸೌಲಭ್ಯ ಅಳವಡಿಸಿಕೊಂಡು ಮಾದರಿಯಾಗಿದೆ. ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರೋ ಶಿರಸಿ ತಾಲೂಕಿನ ಸೋದೆ ವಾದಿರಾಜ ಮಠದಲ್ಲಿ ಸೌರ ವಿದ್ಯುತ್ ಅಳವಡಿಕೆ ಮಾಡೋ ಮೂಲಕ ವಿದ್ಯುತ್ ಸ್ವಾವಲಂಬಿತನ ಸಾಧಿಸಲಾಗಿದೆ. ಆ ಮೂಲಕ ನವೀಕರಿಸಬಲ್ಲ ಇಂಧನ ಬಳಕೆ ಮೂಲಕ ಪರಿಸರದ ಮೇಲಿನ ಒತ್ತಡ ಕಡಿಮೆ ಮಾಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಈ ಮಠ ಇರುವ ಕಾರಣ ವಿದ್ಯುತ್ ಕಣ್ಣಾಮುಚ್ಚಾಲೆ ಸಾಮಾನ್ಯವಾಗಿತ್ತು. ಹೀಗೆ ವಿದ್ಯುತ್ ಕೈಕೊಟ್ಟಾಗ ಜನರೇಟರ್ ಕೂಡ ಬಳಸಲಾಗುತ್ತಿತ್ತು. ಜತೆಗೆ ಭಕ್ತರಿಗೆ ಸ್ನಾನ, ಊಟ, ಉಪಹಾರದ ವ್ಯವಸ್ಥೆಗೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಬಳಸಲಾಗುತ್ತಿತ್ತು. ಭಕ್ತಸ್ನೇಹಿ ವ್ಯವಸ್ಥೆ ಕಲ್ಪಿಸಲು ಸಾಕಷ್ಟು ಹಣವೂ ವೆಚ್ಚವಾಗುತ್ತಿತ್ತು. ಈ ಎಲ್ಲ ಕಾರಣದಿಂದ ಪರಿಸರದ ಮೇಲೆ ಒತ್ತಡ ನಿರ್ಮಾಣ ಆಗುತ್ತಿತ್ತು. ಇದನ್ನು ತಡೆಯೋ ಉದ್ದೇಶದಿಂದ ಮಠಕ್ಕೆ ಸೋಲಾರ್ ಹಾಕಿಸಲಾಗಿದೆ.
ಇಂತಹ ಕಾರ್ಯಗಳಿಗೆ ಪ್ರೇರಣೆಯಾಗಿದ್ದು ಸೋದೆ ವಾದಿರಾಜ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ. ಶ್ರೀಗಳು ನವೀಕರಿಸಬಲ್ಲ ಇಂಧನ ಬಳಕೆಗೆ ಒಲವು ತೋರಿದ ಪರಿಣಾಮ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಯಾಗಿದೆ. ನಾಡಿನ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಅಂಗಸಂಸ್ಥೆ ಆ್ಯಂಟ್ರಿಕ್ಸ್ ಕಾರ್ಪೋರೇಶನ್ ಲಿಮಿಟೆಡ್‌ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಅಡಿಯಲ್ಲಿ 30 ಕಿಲೋ ವ್ಯಾಟ್ ಸಾಮರ್ಥ್ಯದ ಈ ಘಟಕ ನಿರ್ಮಾಣವಾಗಿದೆ. ಉತ್ಕೃಷ್ಟ ಗುಣಮಟ್ಟದ ಸೌರ ಫಲಕಗಳು, ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಇನ್ವರ್ಟರ್ ಉಪಯೋಗಿಸಿ, ವೈಜ್ಞಾನಿಕವಾಗಿ ಮಠದ ವಿದ್ಯುತ್ ಬಳಕೆಯನ್ನು ಅಧ್ಯಯನ ಮಾಡಿ ಘಟಕ ಸ್ಥಾಪಿಸಲಾಗಿದೆ.
ಪ್ರಸ್ತುತ ಮಠದ ಎಲ್ಲ ರೀತಿಯ ವಿದ್ಯುತ್ ಬಳಕೆಯನ್ನು ಸಂಪೂರ್ಣವಾಗಿ ಸೂರ್ಯನಿಂದಲೇ ಪಡೆಯುವಷ್ಟು ವಿದ್ಯುತ್ ಈ ಘಟಕ ಪೂರೈಸುತ್ತಿದೆ. ಇದರೊಂದಿಗೆ ಮಠದಲ್ಲಿ ನಡೆಯುತ್ತಿರುವ ಸಾಂಪ್ರದಾಯಿಕ ಸೌದೆ ಆಧಾರಿತ ಅಡುಗೆಯಲ್ಲಿ ಸೌದೆಯ ಉಪಯೋಗ ತಗ್ಗಿಸುವ ಉದ್ದೇಶದಿಂದ ಅಳವಡಿಸಿರುವ 600 ಲೀಟರ್ ಸಾಮರ್ಥ್ಯದ ಸೋಲಾರ್ ತಂತ್ರಜ್ಞಾನಾಧಾರಿತ ಬಿಸಿನೀರಿನ ಘಟಕ ಸ್ಥಾಪಿಸಲಾಗಿದ್ದು, ಕಾರ್ಯಾರಂಭ ಮಾಡಿವೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಪರಿಸರ ನವೀಕರಿಸಬಲ್ಲ ಇಂಧನ ಮೂಲಗಳಾದ ಸೌರ ಶಕ್ತಿಯ ಬಳಕೆಗೆ ಉತ್ತೇಜನ ನೀಡುತ್ತಿದೆ. ಅದನ್ನು ಮಠದಲ್ಲಿ ಅಳವಡಿಸಿರೋದು ಉತ್ತಮ ನಡೆಯಾಗಿದೆ. ಈ ಮೂಲಕ ಮಠವೊಂದು ಪರಿಸರ ಪೂರಕವಾದ ಹೆಜ್ಜೆ ಇಡೋ ಮೂಲಕ ಮತ್ತಷ್ಟು ಮಠಗಳಿಗೆ, ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಿದೆ.