ಭಟ್ಕಳ: ತಾಲೂಕಿನ ಸೋಡಿಗದ್ದೆ ಇತಿಹಾಸ ಪ್ರಸಿದ್ದ ಶಕ್ತಿ ಕ್ಷೇತ್ರವಾದ ಮಹಾಸತಿ ದೇವಿಯ ಜಾತ್ರಾ ಮಹೋತ್ಸವದ 2ನೇ ದಿನವಾದ ಇಂದು ಕೆಂಡ ಸೇವೆ ಹರಕೆಯಲ್ಲಿ ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಓದಿ: ಕೆಎಸ್‌ಆರ್‌ಟಿಸಿ ಬಸ್-ಕಾರು ಮುಖಾಮುಖಿ : ಭೀಕರ ಅಪಘಾತದಲ್ಲಿ ನಾಲ್ವರ ದುರ್ಮರಣ
ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ ಸೋಡಿಗದ್ದೆ ಅಮ್ಮನವರ ಜಾತ್ರೆಯೂ ಒಂದಾಗಿದೆ. ಈ ಮಹಾಸತಿಯ ದೇವರನ್ನು ನಂಬಿದ ಭಕ್ತರು ಕಷ್ಟಕಾಲದಲ್ಲಿ ಹೇಳಿಕೊಂಡಿದ್ದ ಸಂಪ್ರದಾಯದ ಕೆಂಡ ಸೇವೆಯ ಹರಕೆಯನ್ನು ಇಂದು ಪೂರ್ಣಗೊಳಿಸಿದ್ದಾರೆ.
ಬೆಳಗ್ಗೆ ದೇವಸ್ಥಾನದ ಮುಂಭಾಗದ ಪ್ರಾಂಗಣದಲ್ಲಿ ಸಿದ್ದಪಡಿಸಿದ ಆಳೆತ್ತರದ ಕಟ್ಟಿಗೆ ರಾಶಿಯಿಂದಾಗುವ ಕೆಂಡವನ್ನು ಹಾಯುವುದು ಕೂಡ ರೋಮಾಂಚನವೇ ಸರಿ. ಕೆಂಡಸೇವೆಯ ವಿಶೇಷವೆಂದರೆ ಭಕ್ತರ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವದಾಗಿದ್ದು, ಹರಕೆ ಹೊತ್ತ ಭಕ್ತರ ಸಮಸ್ಯೆ ಪರಿಹಾರವಾದ ನಂತರ ಈ ಜಾತ್ರೆಯ ಕೆಂಡ ಸೇವೆಯನ್ನು ಮಾಡಲಿದ್ದು, ಮುಂದಿನ ದಿನದಲ್ಲಿ ಕುಟುಂಬಕ್ಕಾಗಲಿ ವೈಯಕ್ತಿಕವಾಗಲಿ ಯಾವುದೇ ಕಷ್ಟಬಾರದಿರಲಿ ಎಂದು ಬೇಡಿಕೊಳ್ಳುತ್ತಾರೆ. ಪ್ರೇತಬಾಧೆ, ಸಂತಾನ ಭಾಗ್ಯ, ಉದ್ಯೋಗ, ಕುಟುಂಬಗಳಲ್ಲಿನ ಸಮಸ್ಯೆ, ಕಳ್ಳತನ, ರೋಗ ರುಜಿನಗಳ ಪರಿಹಾರ ಆಗಿ ಹರಕೆ ಸಲ್ಲಿಸಿದ ಸಾಕಷ್ಟು ಉದಾಹರಣೆಗಳಿವೆ.
ಈ ವರ್ಷ ಮಹಿಳೆಯರು, ಮಕ್ಕಳ ಸಂಖ್ಯೆಯೇ ಹೆಚ್ಚಿದ್ದು, ದೇವಿಯ ಹರಕೆಯನ್ನು ಕೆಂಡಸೇವೆಯ ಮೂಲಕ ಸಲ್ಲಿಸಿದರು. ಜಾತ್ರೆ ಪ್ರಾರಂಭವಾಗಿ ಎರಡು ದಿನಗಳಾಗಿದ್ದು, ಈಗಲೇ ದೇವಿಯ ದರ್ಶನಕ್ಕೆ ಕಿಕ್ಕಿರಿದು ಸೇರುತ್ತಿರುವ ಭಕ್ತರ ಸಂಖ್ಯೆ ದೇವಿಯ ಮಹಾತ್ಮೆಯನ್ನು ತಿಳಿಸುತ್ತದೆ. ಬೆಳಗ್ಗೆಯಿಂದ ಪ್ರಾರಂಭವಾದ ಕೆಂಡ ಸೇವೆ ಮಧ್ಯಾಹ್ನ 3 ಗಂಟೆಯ ತನಕ ನಡೆಯಿತು.