ಶಿರಸಿ (ಉತ್ತರಕನ್ನಡ) : ಇಂದು ನಾಗರ ಪಂಚಮಿ ಹಬ್ಬ. ಶಿರಸಿಯ ಉರಗ ಪ್ರೇಮಿಯೊಬ್ಬರು ಜೀವಂತ ನಾಗರಹಾವಿನ ಮರಿಗೆ ಹಾಲೆರೆದು ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಈ ಮೂಲಕ ಉರಗ ಲೋಕದ ವೈಶಿಷ್ಟ್ಯ ಹಾಗೂ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪ್ರಶಾಂತ್ ಹುಲೇಕಲ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ನಿಜ ನಾಗರಹಾವಿಗೆ ಹಾಲೆರೆದು ನಾಗರ ಪಂಚಮಿ ಆಚರಿಸಿದರು. ಪ್ರತಿ ವರ್ಷ ನಾಗರ ಪಂಚಮಿ ದಿನದಂದು ಪ್ರಶಾಂತ್, ನಿಜನಾಗರ ಹಾವಿಗೆ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಮರಿ ನಾಗರ ಹಾವಿಗೆ ಪೂಜೆ ಮಾಡಿದ್ದು ವಿಶೇಷವಾಗಿತ್ತು. ಪ್ರಶಾಂತ್ ಹುಲೇಕಲ್ ಕಳೆದ ಮೂವತ್ತೈದು ವರ್ಷಗಳಿಂದಲೂ ಉರಗ ಸಂತತಿಯ ರಕ್ಷಣೆಯಲ್ಲಿ ತೊಡಗಿದ್ದಾರೆ. ಈ ಮೂಲಕ ನಾಗರ ಪಂಚಮಿಯಂದು ಉರಗಗಳ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.
"ನಾನು ಕಳೆದ ಕೆಲವು ವರ್ಷಗಳಿಂದ ಜೀವಂತ ನಾಗರ ಹಾವಿಗೆ ಪೂಜೆ ಮಾಡಿಕೊಂಡು ಬಂದಿದ್ದೇನೆ. ಉರಗ ರಕ್ಷಕನಾಗಿರುವುದರಿಂದ ಹಾವುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ರೀತಿ ಪೂಜೆ ಮಾಡುತ್ತಿದ್ದೇನೆ. ಹಾವುಗಳ ಮೇಲೆ ನನಗೆ ವಿಶೇಷ ಭಕ್ತಿ ಇದೆ. ಸುತ್ತಮುತ್ತಲಿನ ಜನರಿಗೆ ಹಾವಿನ ಬಗ್ಗೆ ಮಾಹಿತಿ ನೀಡಿ ಅವರಲ್ಲಿಯೂ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇನೆ" ಎಂದು ಪ್ರಶಾಂತ್ ಹುಲೇಕಲ್ ಹೇಳಿದರು.
ಕುಟುಂಬದ ಹಿರಿಯ ವ್ಯಕ್ತಿ ಸುರೇಶ್ ಅವರ ಮರಣಾ ನಂತರ ಅವರ ಮಕ್ಕಳಾದ ಪ್ರಶಾಂತ್, ಪ್ರಕಾಶ್ ಹಾಗೂ ಪ್ರಣವ್ ನಿಜವಾದ ಹಾವಿಗೆ ಪೂಜೆ ಸಲ್ಲಿಸಿ ನಾಗಪಂಚಮಿ ಆಚರಿಸಿಕೊಂಡು ಬರುತ್ತಿದ್ದಾರೆ. ಮನೆ ಮಂದಿ ಹೂವು, ಅಕ್ಷತೆ ಹಾಕಿ ಆರತಿ ಬೆಳಗಿ ಹಬ್ಬದ ದಿನ ಸಂಭ್ರಮಿಸುತ್ತಾರೆ.
ಪ್ರಶಾಂತ್ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬರುವ ಕಾಯಕ ಮಾಡುತ್ತಿದ್ದಾರೆ. ಎಲ್ಲಿ, ಯಾವುದೇ ಸಂದರ್ಭದಲ್ಲಿ ದೂರವಾಣಿ ಕರೆ ಬಂದರೂ ತಕ್ಷಣ ಸ್ಥಳಕ್ಕೆ ದೌಡಾಯಿಸಿ ಹಾವು ರಕ್ಷಿಸಿ ಕಾಡಿಗೆ ಬಿಡುತ್ತಾರೆ. ಅರಣ್ಯ ಇಲಾಖೆಯವರೂ ಹಾವಿನ ರಕ್ಷಣೆಗೆ ಪ್ರಶಾಂತ್ ಅವರನ್ನೇ ಹೆಚ್ಚಾಗಿ ಕರೆಯುತ್ತಾರೆ. ಕಳೆದ ಕೆಲವು ವರ್ಷಗಲಿಂದ ಕಾಡಿಗೆ ಹೋಗಿ ಹಾವು ಹಿಡಿದು ಪೂಜೆ ಸಲ್ಲಿಸಿ ಬರುತ್ತಿದ್ದ ಪ್ರಶಾಂತ್ ಕುಟುಂಬ, ಇಂದು ಮನೆಗೆ ಹಾವು ತಂದು ಪೂಜೆ ಮಾಡಿದ್ದಾರೆ.
ಇದನ್ನೂ ಓದಿ : ಧಾರವಾಡ: ಶಾಲಾ ಮಕ್ಕಳಿಂದ ನಾಗರ ಪಂಚಮಿ ಆಚರಣೆ.. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು