ಕಾರವಾರ: ಪ್ರವಾಸಕ್ಕೆ ಬಂದು ಸಮುದ್ರ ಪಾಲಾಗುತ್ತಿದ್ದ 6 ಮಕ್ಕಳನ್ನು ಲೈಫ್ ಗಾರ್ಡ್ ಹಾಗೂ ಟೂರಿಸ್ಟ್ ಮಿತ್ರ ಸಿಬ್ಬಂದಿ ಇಂದು ರಕ್ಷಿಸಿದ್ದಾರೆ. ಇಲ್ಲಿನ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಈ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಪ್ರವಾಸಕ್ಕೆ ಆಗಮಿಸಿದ್ದ 13 ಮಂದಿ ಪೈಕಿ ಒಂದೇ ಕುಟುಂಬದ 4 ಮಕ್ಕಳು ಸೇರಿ ಒಟ್ಟು 6 ಮಕ್ಕಳು ವಾಟರ್ ಸ್ಪೋರ್ಟ್ಸ್ ಮುಗಿಸಿಕೊಂಡು ಕಡಲ ತೀರದಲ್ಲಿ ಆಟವಾಡುತ್ತಿದ್ದರು. ಈ ವೇಳೆ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಪಾಲಕರಿಗೆ ಮಕ್ಕಳನ್ನು ನೀರಿನಲ್ಲಿ ಮುಂದೆ ಹೋಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. ಆದರೂ ಮಕ್ಕಳು ಆಟವಾಡುತ್ತ ಮುಂದೆ ಸಾಗಿದ್ದು, ಒಮ್ಮೆಲೇ ಬಂದ ಅಲೆಯಿಂದ ಎಲ್ಲರೂ ಕೊಚ್ಚಿ ಹೋಗಿದ್ದಾರೆ.
ತಕ್ಷಣ ಕುಟುಂಬಸ್ಥರು ಕೂಗಿಕೊಂಡಿದ್ದಾರೆ. ಬಳಿಕ ರಕ್ಷಣೆಗೆ ಧಾವಿಸಿದ ಲೈಫ್‌ಗಾರ್ಡ್, ಟೂರಿಸ್ಟ್ ಮಿತ್ರ ಸಿಬ್ಬಂದಿ 6 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಮಕ್ಕಳು ನೀರು ಕುಡಿದಿದ್ದರಿಂದ ಪ್ರಜ್ಞೆ ತಪ್ಪಿದ್ದರು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹಿಂಸಾಚಾರ: ಘಟನೆ 'ದುರದೃಷ್ಟಕರ'... ಯಾರೂ ಇಂತಹ ಜವಾಬ್ದಾರಿ ತೆಗೆದುಕೊಳ್ಳಲ್ಲ ಎಂದ ಸುಪ್ರೀಂ!