ಶಿರಸಿ: ಉತ್ತರ ಕನ್ನಡ ಜಿಲ್ಲೆ ಅರಣ್ಯ ಪ್ರದೇಶಗಳಿಂದಲೇ ಆವೃತವಾಗಿದ್ದು, ಇಲ್ಲಿನ ಮಲೆನಾಡು ಪ್ರದೇಶ ರಾಜ್ಯದಲ್ಲೇ ಅತಿ ಹೆಚ್ಚು ಕಾಡುಗಳನ್ನ ಹೊಂದಿದೆ. ಇಲ್ಲಿನ ಜನರು ನೂರಾರು ವರ್ಷಗಳಿಂದ ಅಂದರೆ ಪೂರ್ವಜರ ಕಾಲದಿಂದಲೂ ಅರಣ್ಯದ ಮಧ್ಯೆಯೇ ಜೀವನ ಸಾಗಿಸುತ್ತಾ ಬಂದಿದ್ದಾರೆ. ಆದರೆ ಈವರೆಗೂ ಮಲೆನಾಡಿನ ಜನರ ಅರಣ್ಯ ಅತಿಕ್ರಮಣ ಸಮಸ್ಯೆ ಮಾತ್ರ ಇನ್ನೂ ಜೀವಂತವಾಗಿಯೇ ಉಳಿದಿದೆ.
ಜಿಲ್ಲೆಯ ಮಲೆನಾಡು ಭಾಗದ ಸುಮಾರು ಮುಕ್ಕಾಲು ಭಾಗದ ಜನರು ಹಲವಾರು ವರ್ಷಗಳಿಂದ ಕಾಡಿನ ಜೊತೆ ಸಂಬಂಧ ಇಟ್ಟುಕೊಂಡು, ಕಾಡಿನಲ್ಲಿಯೇ ಮನೆಗಳನ್ನ ಕಟ್ಟಿಕೊಂಡು ಕಾಡನ್ನು ಉಳಿಸುವ ಜೊತೆಗೆ ತಮ್ಮ ಜೀವನವನ್ನ ಕೂಡ ಸಾಗಿಸುತ್ತಿದ್ದಾರೆ. ಹೆಚ್ಚಿನ ಅರಣ್ಯ ಇಲ್ಲದ ಅರಣ್ಯ ಭೂಮಿಗಳೇ ಇವರ ಕೃಷಿಗೆ ಜೀವನಾಧಾರವಾಗಿವೆ. ಇಲ್ಲಿನ ಜನರ ಪೂರ್ವಜರು ಹಲವಾರು ವರ್ಷಗಳಿಂದ ಈ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಾ ಬಂದಿದ್ದಾರೆ.
ಕಾಡುಗಳನ್ನು ದೇವರೆಂದು ಪೂಜಿಸುತ್ತಾ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನ ಮಾಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶಗಳನ್ನ ಹೊಂದಿರುವ ಜಿಲ್ಲೆ ಎಂದು ಉತ್ತರ ಕನ್ನಡವನ್ನ ಗುರುತಿಸಲಾಗಿದೆ. ಆದ್ರೆ ಇಲ್ಲಿನ ಜನರ ಪೂರ್ವಜರು ಸಾಗುವಳಿ ಮಾಡುತ್ತಿದ್ದ ಭೂಮಿಯನ್ನ ಅರಣ್ಯ ಇಲಾಖೆ ಇನ್ನೂ ಕೂಡ ಜನರಿಗೆ ನೀಡದೆ ಸತಾಯಿಸುತ್ತಿದೆ. 1978ಕ್ಕಿಂತ ಮೊದಲೇ ಸಾಗುವಳಿ ಮಾಡಿದ ಭೂಮಿಯನ್ನ ಅವರ ಹೆಸರಿಗೆ ಪಟ್ಟಾ ನೀಡುತ್ತೇವೆ ಎಂದು ಸರ್ಕಾರಗಳು ಹೇಳುತ್ತಲೇ ಬರುತ್ತಿವೆ. ಆದ್ರೆ ಆ ಭರವಸೆಗಳು ಈವರೆಗೂ ಈಡೇರಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಹಿಂದೆ ಹಲವಾರು ಕುಟುಂಬಗಳಿಗೆ ಸರ್ಕಾರ ಪಟ್ಟಾ ನೀಡಿತ್ತು. ಆದ್ರೆ 1978ರ ಮೊದಲು ಭೂಮಿಯನ್ನ ಸಾಗುವಳಿ ಮಾಡುತ್ತ ಬಂದಿದ್ದಾರೆ ಅನ್ನೋದಕ್ಕೆ ಸಾಕ್ಷಿಯನ್ನ ಒದಗಿಸಬೇಕಿತ್ತು. ಆಗ ಹಲವಾರು ಕುಟುಂಬಗಳು ಸಾಕ್ಷಿಗಳನ್ನು ಕೂಡ ಒದಗಿಸಿದ್ದರು. ಆದರೆ ಇದೀಗ 3 ತಲೆಮಾರಿನ ಹಿಂದೆ ಸಾಗುವಳಿ ಮಾಡಲಾಗುತ್ತಿದೆ ಅನ್ನೋ ಕ್ಲಿಷ್ಟಕರವಾದ ಕಾಗದ ಪತ್ರಗಳನ್ನ ಒದಗಿಸುವಂತೆ ಅರಣ್ಯ ಇಲಾಖೆ ಕೇಳಿತ್ತು.
ಇಂತಹ ಕಾಗದ ಪತ್ರಗಳು ಯಾರಲ್ಲಿಯೂ ಇಲ್ಲದಿರುವುದರಿಂದ ಸಹಜವಾಗಿಯೇ ಇದರ ವಿರುದ್ಧ ಅತಿಕ್ರಮಣಾದಾರ ಕುಟುಂಬಗಳು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದವು. ಇದೀಗ ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಸಚಿವರ ಜೊತೆ ಇದರ ಬಗ್ಗೆ ಮಾತನಾಡಲಾಗಿದೆ. ಸದ್ಯದಲ್ಲಿಯೇ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿರುವುದು ಅತಿಕ್ರಮಣಾದಾರರಲ್ಲಿ ಸ್ವಲ್ಪ ಮಟ್ಟಿನ ನೆಮ್ಮದಿ ತಂದಿದೆ.
ಒಟ್ಟಿನಲ್ಲಿ ಜಿಲ್ಲೆಯ ಮಲೆನಾಡಿಗರನ್ನು ದಶಕಗಳಿಂದ ಕಾಡುತ್ತಿದ್ದ ಸಮಸ್ಯೆಯೊಂದು ಮುಕ್ತಾಯಗೊಳ್ಳುವ ಸಮಯ ಹತ್ತಿರ ಬಂದಂತೆ ಕಾಣುತ್ತಿದೆ.