ಶಿರಸಿ: ಸುಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಸೇವೆ ದರ ಹೆಚ್ಚಳ ಮಾಡಲು ತಯಾರಿ ನಡೆದಿದೆ. ಇದಕ್ಕೆ ಭಕ್ತ ವಲಯದಿಂದ ಅಪಸ್ವರದ ಮಾತುಗಳು ಕೇಳಿ ಬರುತ್ತಿದ್ದು, ವಾಣಿಜ್ಯೀಕರಣ ಮಾಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಒಂದೂವರೆ ವರ್ಷದಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಇತ್ತೀಚೆಗಷ್ಟೇ ಸಾರ್ವಜನಿಕ ದರ್ಶನಕ್ಕೆ, ಸೇವೆಗೆ ಅವಕಾಶ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ದೇವಸ್ಥಾನದ ಪೂಜೆ ಇನ್ನಿತರೆ ಸೇವೆಗೆ ದುಬಾರಿ ಶುಲ್ಕ ವಿಧಿಸಲು ಮುಂದಾಗಿರುವುದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಹೊಸ ದರ ಪ್ರಕಟಿಸುವ ಸಂಬಂಧ ಕರಡು ದರ ಪಟ್ಟಿಯನ್ನು ದೇವಸ್ಥಾನದ ಪ್ರವೇಶ ದ್ವಾರದ ಬಳಿ ಸೂಚನಾ ಫಲಕಕ್ಕೆ ಹಾಕಲಾಗಿದೆ. ಧರ್ಮದರ್ಶಿ ಮಂಡಳಿ ಸದ್ಯಕ್ಕೆ ಪ್ರಕಟಿಸಿರುವ ದರ ಪಟ್ಟಿಯ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಿಗದಿತ ಮಾನದಂಡವಿಲ್ಲದೇ ಕೆಲ ಸೇವೆಗಳಿಗೆ ಏಕಾಏಕಿ ಐದಾರು ಪಟ್ಟು ದರ ಹೆಚ್ಚಳ ಮಾಡಲು ಹೊರಟಿರುವುದು ಸರಿಯಲ್ಲ. ಅಭಿವೃದ್ಧಿ ಕೆಲಸಕ್ಕೆ ಸೇವಾ ದರ ಪರಿಷ್ಕರಣೆಯೇ ಮಾರ್ಗವಲ್ಲ, ಭಕ್ತರಿಗೆ ಹೊರೆಯಾಗುವಷ್ಟು ದರ ಏರಿಸುವುದು ಸೂಕ್ತವಲ್ಲ. ಕೂಡಲೇ ಹೆಚ್ಚಿನ ಸೇವಾ ದರ ಪರಿಷ್ಕರಣೆ ಹಿಂಪಡೆಯಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ರುದ್ರಾಭಿಷೇಕ ಸೇವೆಗೆ 10ರೂ. ಬದಲು 100ರೂ, ಮೃತ್ಯುಂಜಯ ಶಾಂತಿಗೆ 1,001 ರೂ. ಬದಲು 3,500 ರೂ., ಸತ್ಯನಾರಾಯಣ ಕಥೆಗೆ 325ರ ಬದಲು 1500 ರೂ, ನಿರಂತರ ಪಲ್ಲಕ್ಕಿ ಸೇವೆ ದರಗೆ 6,001 ರಿಂದ 25,000ಕ್ಕೆ ಏರಿಕೆ ಮಾಡಲಾಗಿದೆ. ಕಾರ್ತೀಕ ದೀಪೋತ್ಸವದ ಒಂದು ದಿನದ ಸೇವೆ 650 ರಿಂದ 5,000 ರೂ. ಮತ್ತು ಶಾಶ್ವತ ಸೇವೆಗೆ 6,001ರ ಬದಲು 10,001 ರೂ,. ನಿರಂತರ ಸೇವೆ ಪಾರಾಯಣ 2001ರ ಬದಲಾಗಿ 5,000 ರೂ., ಶಾಶ್ವತ ಸೇವೆಗೆ 6001ರ ಬದಲು 10,000 ಕ್ಕೆ ಏರಿಕೆ ಮಾಡಿ ಕರಡು ಪಟ್ಟಿ ಪ್ರಕಟಿಸಲಾಗಿದೆ.
ಆದರೆ, ಭಕ್ತರು ಆಕ್ಷೇಪ ಸಲ್ಲಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ಸೆ. 5ರ ವರೆಗೆ ಆಕ್ಷೇಪಣೆ ಸಲ್ಲಿಕೆಗೆ ಭಕ್ತರಿಗೆ ಅವಕಾಶವಿದೆ. ಈಗ ನಿಗದಿಪಡಿಸಿದ ದರ ಅಂತಿಮವಲ್ಲ ಎಂದು ಧರ್ಮದರ್ಶಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಶ್ರೀ ಮಾರಿಕಾಂಬೆಯ ಸೇವಾ ವಿಧಾನಗಳಿಗೆ ದರ ಪಟ್ಟಿ ಹೆಚ್ಚಿಸಿರುವುದಕ್ಕೆ ಭಕ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ. ಕೋವಿಡ್ ಸಂದರ್ಭದಲ್ಲಿ ಭಕ್ತರಿಗೆ ಸೇವಾ ದರ ಹೊರೆಯಾಗುವಂತೆ ಮಾಡಬಾರದು ಎಂಬ ಆಗ್ರಹ ವ್ಯಕ್ತವಾಗಿದೆ.