ಶಿರಸಿ : ಬಹು ನಿರೀಕ್ಷಿತ ಶಿರಸಿ-ಕುಮಟಾ ಹೆದ್ದಾರಿ ಅಗಲೀಕರಣ ಹಾಗೂ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಪ್ರಕ್ರಿಯೆ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ. ಇದರ ಜತೆಗೆ ರಸ್ತೆಯ ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಶಿರಸಿಯಿಂದ ಕುಮಟಾವರೆಗೆ ಸುಮಾರು 60 ಕಿ.ಮೀ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೊಳ್ಳಲಿದೆ. ಅಂದಾಜು 370 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ. ಕಾಮಗಾರಿ ಆರಂಭಗೊಂಡು ಹಲವು ತಿಂಗಳು ಕಳೆದರೂ ಅಲ್ಪ ಪ್ರಮಾಣದ ಕೆಲಸ ಮಾತ್ರ ಆಗಿದ್ದು, ವಿಳಂಬಕ್ಕೆ ಕೊರೊನಾ ಕಾರಣ ಎನ್ನುವ ಉತ್ತರ ಲಭ್ಯವಾಗಿದೆ.
ಹೆದ್ದಾರಿ ಮೇಲ್ದರ್ಜೆ ಕಾಮಗಾರಿಯನ್ನು ತಾಲೂಕಿನ ಹೆಗಡೆ ಕಟ್ಟಾ ಕ್ರಾಸ್ನಿಂದ ಆರಂಭಿಸಲಾಗಿದೆ. ಕಾಮಗಾರಿ ಆರಂಭವಾಗಿ ಕೆಲವೇ ದಿನಗಳಿಗೆ ಅರಣ್ಯ ನಾಶದ ಕುರಿತು ನ್ಯಾಯಾಲಯಕ್ಕೆ ಕೆಲವರು ಮೊರೆ ಹೋದ ಪರಿಣಾಮ ಕೆಲಸ ಸ್ಥಗಿತಗೊಂಡಿತ್ತು. ನಂತರ ಕಾಮಗಾರಿ ಆರಂಭವಾದರೂ ಅತ್ಯಂತ ಮಂದಗತಿಯಲ್ಲಿ ಕೆಲಸ ಸಾಗಿದೆ.
ಹನುಮಂತಿ ಬಳಿ ಟೋಲ್ ಗೇಟ್ ಮಾಡಲು ಜಾಗ ವಿಸ್ತರಣೆ ಮಾಡಿದ್ದು, ಉಳಿದಂತೆ ಒಂದು ಕಡೆ ಸಂಪೂರ್ಣ ಡಾಂಬರ್ ಕಿತ್ತು ರಸ್ತೆ ಸಂಚಾರ ನಿಷೇಧಿಸಲಾಗಿದೆ. ಅಲ್ಲದೇ ಇದು ಸ್ಥಳೀಯರ ಓಡಾಟದ ರಸ್ತೆಯಾಗಿದ್ದು, ಇಲ್ಲಿ ಅಪಘಾತ ಸಂಭವಿಸಿದರೆ ವಿಮೆಯೂ ಲಭ್ಯವಿಲ್ಲ. ಹೀಗಾಗಿ, ಶೀಘ್ರದಲ್ಲಿಯೇ ರಸ್ತೆ ಸುಧಾರಣೆಯಾಗಬೇಕಿದೆ.
ಕಾಮಗಾರಿ ಮಂದಗತಿಯೊಂದಿಗೆ ರಸ್ತೆಯು ಹದಗೆಟ್ಟಿದೆ. ರಸ್ತೆಯ ಒಂದು ಕಡೆ ಸಂಚಾರ ನಿಷೇಧಿಸಲಾಗಿದೆ. ಇನ್ನೊಂದು ಕಡೆ ವಾಹನ ಸವಾರರಿಗೆ ನರಕ ದರ್ಶನವಾಗುತ್ತಿದೆ. ಸಂಪೂರ್ಣ ರಸ್ತೆ ಹೊಂಡಗಳಿಂದ ತುಂಬಿದ್ದು, ಒಮ್ಮೆಲೇ ದೊಡ್ಡ ವಾಹನ ಬಂದಲ್ಲಿ ಅಪಘಾತ ಉಂಟಾಗುವ ಸಾಧ್ಯತೆಯೂ ಇದೆ. ಇದಲ್ಲದೇ ಶಿರಸಿ ಐದು ರಸ್ತೆ ಅಭಿವೃದ್ಧಿ ಕೂಡ ನೆನೆಗುದಿಗೆ ಬಿದ್ದಿದೆ.
ಕೊರೊನಾ ಲಾಕ್‌ಡೌನ್ ನಡುವೆ ರಸ್ತೆ ಕಾಮಗಾರಿಗೆ ಅವಕಾಶ ನೀಡಿದ್ದರೂ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಬೇಸಿಗೆಯ ಸಂದರ್ಭದಲ್ಲಿ ರಸ್ತೆ ಅಭಿವೃದ್ಧಿ ಮಾಡಿದ್ದಲ್ಲಿ ಜನರು ಪರದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಅಗತ್ಯವಿದೆ. ತಕ್ಷಣ ತುರ್ತು ಕ್ರಮ ಕೈಗೊಂಡು ಹೊಂಡ ಮುಚ್ಚುವ ಕೆಲಸವಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.