ಶಿರಸಿ: ಸರಕಾರಿ ಆಸ್ಪತ್ರೆಯೊಂದರ ಮುಂದೆ ಕಾಳಿಂಗ ಸರ್ಪ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕೆಲ ಕಾಲ ಭಯ ಹುಟ್ಟಿಸಿದ್ದು, ಉರಗ ತಜ್ಞರ ಸಹಾಯದಿಂದ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡದ ಜೋಯಿಡಾದಲ್ಲಿ ನಡೆದಿದೆ.
ಜೋಯಿಡಾ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಮರಿ ಕಾಳಿಂಗ ಸರ್ಪ ಕಾಣಿಸಿಕೊಂಡು ರೋಗಿಗಳಲ್ಲಿ ಭಯ ಹುಟ್ಟಿಸಿತ್ತು. ಸರ್ಪವನ್ನು ನೋಡಿ ಜನ ಸಂದಣಿ ಸೇರುತ್ತಿದ್ದಂತೆ ಹಾವು ಗಾಬರಿಯಿಂದ ಆಸ್ಪತ್ರೆಯ ಎದುರಿಗಿರುವ ಮನೆಯ ಚರಂಡಿ ಒಳಗೆ ಸೇರಿಕೊಂಡಿದೆ. ನಂತರ ಉರಗ ತಜ್ಞ, ಉಪ ವಲಯ ಅರಣ್ಯಾಧಿಕಾರಿ ಎ. ಪ್ರಸನ್ನ ಸ್ಥಳಕ್ಕೆ ಆಗಮಿಸಿ ಸುಮಾರು 8 ಅಡಿ ಉದ್ದವಿದ್ದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಮರಳಿ ಬಿಟ್ಟಿದ್ದಾರೆ.