ಭಟ್ಕಳ: ಕೋವಿಡ್ ಕಠಿಣ ಮಾರ್ಗಸೂಚಿಯಿಂದಾಗಿ ನಿನ್ನೆ ಅದ್ಧೂರಿಯಾಗಿ ನಡೆಯಬೇಕಾಗಿದ್ದ ತಾಲೂಕಿನ ಗ್ರಾಮ ದೇವರಾದ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ರಥೋತ್ಸವವನ್ನು ಕೇವಲ ಧಾರ್ಮಿಕ ವಿಧಿ ವಿಧಾನ, ಅರ್ಚಕರ ಮೂಲಕ ದೇವಸ್ಥಾನದ ಆಡಳಿತ ಮಂಡಳಿಯವರ ಉಪಸ್ಥಿತಿಯಲ್ಲಿ ಸರಳವಾಗಿ ನಡೆಸಲಾಯಿತು.
ವೇ.ಮೂ.ರಮಾನಂದ ಅವಬೃತರ ಆಚಾರ್ಯತ್ವದಲ್ಲಿ ಜಾತ್ರಾ ಕಾರ್ಯಕ್ರಮದ ಧಾರ್ಮಿಕ ವಿಧಿ ವಿಧಾನಗಳ ಸಕಲ ರೀತಿಯ ತಯಾರಿಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಲಾಯಿತು. ಕಳೆದ ಎರಡು ಮೂರು ದಿನದಿಂದ ಜಾತ್ರೆ ನಡೆಯುತ್ತಾ ಇಲ್ಲವಾ ಎಂಬ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲವಿತ್ತು. ತಾಲೂಕಾಡಳಿತ ಹೆಚ್ಚಿನ ಭಕ್ತರನ್ನು ಸೇರಿಸದೇ ಮಾಡಬಹುದು ಎಂಬ ಸೂಚನೆ ನೀಡಿದ್ದು, ದೇವಸ್ಥಾನದ ಆಡಳಿತ ಮಂಡಳಿ ಅದರಂತೆ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸರ್ಕಾರವು ಏಕಾಏಕಿ ಧಾರ್ಮಿಕ ಕಾರ್ಯಕ್ರಮ, ಸಮಾರಂಭ ನಿಷೇಧಿಸಬೇಕೆಂಬ ಆದೇಶ ಹೊರಡಿಸಿದ್ದರಿಂದ ದೇವಸ್ಥಾನದ ಆಡಳಿತ ಮಂಡಳಿಗೆ ಇನ್ನಷ್ಟು ಇಕ್ಕಟ್ಟಾಯಿತು.
ಆದರೆ ಜಾತ್ರಾ ತಯಾರಿ ಒಂದು ಬಾರಿ ಆರಂಭಿಸಿದ ಮೇಲೆ ನಿಲ್ಲಿಸಿದರೆ ಅದು ಅಪಶಕುನವಾಗಲಿದ್ದು, ಇವೆಲ್ಲದರ ಮಧ್ಯೆ ತಾಲೂಕಾಡಳಿತಕ್ಕೆ ಕೇವಲ ಧಾರ್ಮಿಕ ವಿಧಿ ವಿಧಾನಗಳು ನಡೆಸಲು ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿತ್ತು. ಮುಂಜಾನೆಯಿಂದಲೇ ದೇವಳದಲ್ಲಿ ಸಾಂಪ್ರದಾಯಿಕವಾಗಿ ಧಾರ್ಮಿಕ ವಿಧಿ ವಿಧಾನ, ಪೂಜೆ ಪುನಸ್ಕಾರ ಹಾಗೂ ಹೋಮ ಹವನಾದಿಗಳು ನಡೆದಿದ್ದು, ಬೆರಳಣಿಕೆಯಷ್ಟು ಮಂದಿ ಭಕ್ತರು ಬಂದು ಕೇವಲ ದೇವರ ದರ್ಶನ ಪಡೆದು ತೆರಳಿದರು.
ಸರ್ಕಾರದ ಆದೇಶದಂತೆ ಕೋವಿಡ್ ಮಾರ್ಗಸೂಚಿಯನ್ವಯ ದೇವಸ್ಥಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ದೇವಸ್ಥಾನದ ಒಳಗೆ ಹಾಗೂ ಹೊರಗಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅದರಂತೆ ದೇವಸ್ಥಾನಕ್ಕೆ ಬರುವ ನಾಲ್ಕು ದಿಕ್ಕಿನಲ್ಲಿಯೂ ಮಂಗಳವಾರ ತಡ ರಾತ್ರಿಯೇ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು.
ಸುಮಾರು 11.30ರ ಬಳಿಕ ರಥೋತ್ಸವಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿದ್ದು, ಹನುಮಂತನಿಗೆ ಮೊದಲು ಪೂಜೆ ಸಲ್ಲಿಸಲಾಯಿತು. ನಂತರ ಬಲಿ ಪೂಜೆಯ ಬಳಿಕ ಹನುಮಂತನ ವಿಗ್ರಹವನ್ನು ರಥದಲ್ಲಿ ಕುಳ್ಳಿರಿಸಲಾಯಿತು. ನಂತರ 10 ಮೀಟರ್ಗಳಷ್ಟು ದೂರದವರೆಗೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಬೆರಳಣಿಕೆಯ ಭಕ್ತಾದಿಗಳಿಂದ ರಥವನ್ನು ಎಳೆಯಲಾಯಿತು. ರಥವನ್ನು ಎಳೆದು ನಂತರ ಸಂಪ್ರದಾಯಬದ್ಧವಾಗಿ ಶಾಸ್ತ್ರದಂತೆ ರಥ ಎಳೆದು ಹನುಮಂತನ ವಿಗ್ರಹವನ್ನು ರಥದಿಂದ ಕೆಳಗೆ ತಂದು ರಥೋತ್ಸವ ಪೂಜೆ ಮಾಡಲಾಯಿತು.
ಪೂಜಾ ಸೇವೆಗಳೆಲ್ಲವೂ ಬಂದ್:
ತಾಲೂಕಾಡಳಿತದ ಆದೇಶದಂತೆ ದೇವಸ್ಥಾನದ ಆಡಳಿತ ಮಂಡಳಿ ದೇವಳದೊಳಗೆ ಭಕ್ತರಿಗೆ ಎಲ್ಲಾ ಸೇವೆ, ತೀರ್ಥ ಪ್ರಸಾದವನ್ನು ಬಂದ್ ಮಾಡಲಾಗಿತ್ತು. ಆದರೆ ಕೆಲ ಭಕ್ತರು ರಥಕ್ಕೆ ಹಾಗೂ ಹನುಮಂತ ದೇವರಿಗೆ ತೆಂಗಿನಕಾಯಿ ಸಲ್ಲಿಸಲು ಬಂದಿದ್ದರು. ಪೂಜಾ ಸೇವೆಗಳೆಲ್ಲವೂ ಬಂದ್ ಇದ್ದ ಹಿನ್ನೆಲೆ ದೇವಸ್ಥಾನದ ಹೊರಗೆ ಇರುವ ಕಲ್ಲಿಗೆ ತೆಂಗಿನಕಾಯಿಯನ್ನು ಅವರೇ ಒಡೆದು ಮನೆಗೆ ತೆಗೆದುಕೊಂಡು ಹೋಗುವುದು ಕಂಡು ಬಂತು.
ಇದನ್ನೂ ಓದಿ: 10 ರಾಜ್ಯಗಳ ಸಿಎಂಗಳ ಜೊತೆ ಮೋದಿ ಸಭೆ: ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿ
ನಂತರ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಸುನೀಲ ನಾಯ್ಕ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಬೆಳ್ಳಿಯಪ್ಪ, ಸಿಪಿಐ ದಿವಾಕರ್, ನಗರ ಠಾಣೆ ಪಿಎಸೈಗಳು, ಗ್ರಾಮೀಣ ಠಾಣೆ ಪಿಎಸೈಗಳು ನೂರಾರು ಪೊಲೀಸ್ ಸಿಬ್ಬಂದಿ ಇದ್ದು, ದೇವಾಲಯದ ಸುತ್ತ ಬಂದೋಬಸ್ತ್ ಮಾಡಲಾಗಿತ್ತು.