ಶಿರಸಿ: ರಾಜ್ಯ ಸಭೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಯಾವ ರಾಜಕೀಯ ಸಂಬಂಧವನ್ನೂ ಮಾಡಿಕೊಳ್ಳಲ್ಲ,ಜೆಡಿಎಸ್ ಜೊತೆ ಚುನಾವಣೆ ಸಂಬಂಧವೂ ಇಲ್ಲ ಬೇರೆ ಸಂಬಂಧವೂ ಇಲ್ಲ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶಿರಸಿಯ ಸುಪ್ರಿಯ ಹೋಟೆಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಷ್ಟ್ರಮಟ್ಟದ ರಾಜಕೀಯಕ್ಕೆ ಕೈಹಾಕಲು ನಾನು ಹೋಗುವುದಿಲ್ಲ. ನಾನು ಕರ್ನಾಟಕಕ್ಕೆ ಸೀಮಿತವಾಗಿ ಇರುತ್ತೇನೆ. ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶೇ 50ರಷ್ಟು, ಐವತ್ತು ವರ್ಷದ ಒಳಗೆ ಇರುವವರಿಗೆ (ಯುವಕರಿಗೆ) ಮುಂದಿನ ವಿಧಾನಸಭೆಯಲ್ಲಿ ಟಿಕೆಟ್ ಕೊಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದ ಅವರು, ಮಕ್ಕಳ ತಲೆಯಲ್ಲಿ ಎಳಯ ವಯಸ್ಸಲ್ಲೇ ವಿವಾದ ತುಂಬುವ ಕಾರ್ಯ ಸರ್ಕಾರದಿಂದ ಆಗುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆ ಎಂಬ ವಿವಾದಾತ್ಮಕ ವಿಚಾರದಿಂದ ಸಂವಿಧಾನದ ಆಶಯಕ್ಕೆ ಧಕ್ಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಸೀದಿಗಳಲ್ಲಿ ದೇವಾಲಯ ಹುಡುಕುವ ಕಾರ್ಯ ಸರಿಯಲ್ಲ. ಪ್ರಾರ್ಥನೆ ಮಾಡುವುದು ಆಯಾಯಾ ಧರ್ಮಗಳ ಪದ್ಧತಿ. ಅದನ್ನು ಸ್ವತಂತ್ರವಾಗಿ ಮಾಡಲು ಯಾರೂ ಧಕ್ಕೆ ಮಾಡಬಾರದು. ಅದು ಸಂವಿಧಾನ ಬಾಹಿರ. ಎಲ್ಲ ಜಾತಿ, ಧರ್ಮಗಳಿಗೂ ಸಮಾನ ಅವಕಾಶ ಇರುವ ಕಾರಣ ಯಾರು ಕೂಡ ಮಧ್ಯಪ್ರವೇಶಿಸುವ ಕಾರ್ಯ ಮಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ಮೊಬೈಲ್ ಕಳೆದು ಹೋದರೆ, ಕಳ್ಳತನವಾದ್ರೆ ಚಿಂತೆ ಬೇಡ.. ಈ 'APP' ಹುಡುಕಿಕೊಡಲಿದೆ ನಿಮ್ಮ ಫೋನ್!