ಶಿರಸಿ: ಆಪರೇಷನ್ ಕಮಲದ ಪಿತಾಮಹ ಮಿಸ್ಟರ್ ಯಡಿಯೂರಪ್ಪ ಅನರ್ಹ ಶಾಸಕರಿಗೆ ₹ 20 ಕೋಟಿ ನೀಡಿದ್ದಾರೆ. ಲಂಚದ ಹಣ ತಂದು ಶಾಸಕರಿಗೆ ಕೊಟ್ಟು ಸಮ್ಮಿಶ್ರ ಸರ್ಕಾರ ಕೆಡವಿ ಹಾಕಿದ್ದರು. ಮಹಾರಾಷ್ಟ್ರದಲ್ಲಿ ಕಳ್ಳರ ರೀತಿ ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆ ಕೊನೆ ಮಾಡಿ ಅಧಿಕಾರಕ್ಕೆ ಬರ್ತಾರೆ. ಇದು ಪ್ರಜಾಪ್ರಭುತ್ವದ ಕಗ್ಗೋಲೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಯಲ್ಲಾಪುರ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅನಂತ್ ಕುಮಾರ್ ಹೆಗಡೆ ಗ್ರಾಮ ಪಂಚಾಯತ್ ಮೆಂಬರ್ ಆಗೋದಕ್ಕೂ ನಾಲಾಯಕ್, ಸಂವಿಧಾನವೇ ಅವನಿಗೆ ಗೊತ್ತಿಲ್ಲ. ನನ್ನ ಹೋರಾಟವೇ ಕೋಮುವಾದಿ ಜಾತಿವಾದಿಗಳ ವಿರುದ್ಧ ಎಂದರು.
ಅನಂತ್ ಕುಮಾರ್ ಏನ್ ಮಾತಾಡ್ತಾರೆ ಅನ್ನುವುದು ಅವರಿಗೆ ಗೊತ್ತಿರುವುದಿಲ್ಲ. ನಾನು ಅಧಿಕಾರಕ್ಕೆ ಬಂದಿರುವುದೆ ಸಂವಿಧಾನ ಬದಲಿಸಲು ಎನ್ನುತ್ತಾರೆ. ನಾನೇನಾದ್ರು ಪಿಎಂ ಆಗಿದ್ದರೆ ಸಚಿವ ಸ್ಥಾನದಿಂದ ಅವರನ್ನು ಕಿತ್ತು ಹಾಕುತ್ತಿದ್ದೆ ಎಂದರು. ಚುನಾವಣೆ ಆದ ಮೇಲೆ ಯಡಿಯೂರಪ್ಪ ಸರ್ಕಾರ ಹೋಗುತ್ತದೆ. ಚುನಾವಣೆ ನಂತರ ಯಡಿಯೂರಪ್ಪ ರಾಜೀನಾಮೆ ಕೊಡ್ತಾರೆ. ಮಧ್ಯಂತರ ಚುನಾವಣೆ ಬರುತ್ತದೆ ನಾವೇ ಆಡಳಿತ ನಡೆಸುತ್ತೇವೆ. ಏಳು ಕೆಜಿ ಅಕ್ಕಿ ಬದಲು ಹತ್ತು ಕೆಜಿ ಅಕ್ಕಿಯನ್ನು ಬಡವರಿಗೆ ನೀಡುತ್ತೇವೆ ಎಂದರು. ಇನ್ನು ಹೆಬ್ಬಾರ್ ಬಿಜೆಪಿ ಯಿಂದ ಕಾಂಗ್ರೆಸ್ಗೆ ಕರೆತಂದ ದೇಶಪಾಂಡೆಗೆ ಚೂರಿ ಹಾಕಿದ್ದಾರೆ. ಹಾಗೆಯೇ ಮತ ನೀಡಿದವರಿಗೂ ಚೂರಿ ಹಾಕಿದ್ದಾರೆ ಇವರಿಗೆ ತಕ್ಕ ಪಾಠ ಕಲಿಸಿ ಎಂದರು.
ಹೆಬ್ಬಾರ್ ಬಿಜೆಪಿಯಲ್ಲಿ ಈ ಹಿಂದೆ ಜಿಲ್ಲಾಧ್ಯಕ್ಷರಾಗಿದ್ದ ವೇಳೆ ಅನಂತಕುಮಾರ್ ಹಗ್ಡೆ ಬಳಿ ಬೂಟಿನಿಂದ ಹೊಡೆತ ತಿಂದು ಬಿಜೆಪಿ ಬಿಟ್ಟು ಹೊರಬಂದು ಕಾಂಗ್ರೆಸ್ ಸೇರಿದ್ರು ಈಗ ಪುನಹ ಬಿಜೆಪಿಗೆ ಸೇರಿದ್ದಾರೆ. ನಾಚಿಗೆಯಾಗಬೇಕು, ಅವರ ಬಂಡವಾಳ ಹೊರಹಾಕಿದ್ರೆ ಬೆಟ್ಟದಷ್ಟಿದೆ ಎಂದು ಜೆಡಿಎಸ್ ನಿಂದ ಕಾಂಗ್ರೆಸ್ಗೆ ಮರಳಿ ಬಂದ ಯಲ್ಲಾಪುರದ ಮುಖಂಡ ರವೀಂದ್ರ ನಾಯ್ಕರವರು ಆರೋಪಿಸಿದರು.