ಕಾರವಾರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಅಥವಾ ತೇರದಾಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿಸಿದ್ದಾರೆ.
ಭಾನುವಾರ ಹೊನ್ನಾವರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಾಮಸೇನೆ ವತಿಯಿಂದ ಐವರು ಸ್ವಾಮೀಜಿಗಳು ಸೇರಿದಂತೆ 25 ಕ್ಷೇತ್ರಗಳಲ್ಲಿ ಹಿಂದು ಕಾರ್ಯಕರ್ತರು ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಭಟ್ಕಳ ಹಾಗೂ ಹಳಿಯಾಳ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದರು.
ಶಾಸಕರುಗಳು ಮೇಸ್ತ ಸಾವಿನ ಫಲಾನುಭವಿಗಳು : ಪರೇಶ ಮೇಸ್ತ ಸಾವಿನ ಪ್ರಕರಣವನ್ನು ತಕ್ಷಣ ಮುಖ್ಯಮಂತ್ರಿಗಳು ಮರುತನಿಖೆಗೆ ಒಪ್ಪಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಐವರೂ ಬಿಜೆಪಿ ಶಾಸಕರ ಮನೆಯೆದುರು ಶ್ರೀರಾಮಸೇನೆ ಕಾರ್ಯಕರ್ತರು ಧರಣಿ ನಡೆಸಿ ಮರ್ಯಾದೆ ಹರಾಜು ಹಾಕುತ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.
ಪರೇಶ್ ಮೇಸ್ತ ಸಾವಿನ ಪ್ರಕರಣ ಮರು ತನಿಖೆ ಮಾಡಬೇಕು : ಹೆಣದ ಮೇಲೆ ರಾಜಕೀಯ ಮಾಡಿದ ಬಿಜೆಪಿಗೆ ಮಾನವೀಯತೆ ಕಿಂಚಿತ್ತಾದರೂ ಇದ್ದರೆ ಮುಖ್ಯಮಂತ್ರಿಗಳು ಪ್ರಕರಣವನ್ನು ತಕ್ಷಣ ಮರುತನಿಖೆಗೆ ಕೊಡಬೇಕು. ಸಿದ್ದರಾಮಯ್ಯ, ಆಗಿನ ಜಿಲ್ಲಾಧಿಕಾರಿ ಹಾಗೂ ಪೋಸ್ಟಮಾರ್ಟ್ಂ ಮಾಡಿದ ಮಣಿಪಾಲದ ವೈದ್ಯರನ್ನು ಪ್ರತಿವಾದಿ ಮಾಡಬೇಕು ಎಂದು ಆಗ್ರಹಿಸಿದರು.
ಪರೇಶ ಮೇಸ್ತ ನಿಗೂಢವಾಗಿ ಸಾವನ್ನಪ್ಪಿ ಐದು ವರ್ಷ ಕಳೆದಿವೆ. ಆವತ್ತಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸರಕಾರ ಪ್ರಕರಣವನ್ನು ಮುಚ್ಚಿ ಹಾಕಲು ಏನು ಬೇಕೋ ಅದನ್ನೆಲ್ಲ ವ್ಯವಸ್ಥಿತವಾಗಿ ಮಾಡಿದ್ದಾರೆ. ಅವನ ಸಾವಿಗೆ ಬಿಜೆಪಿ ನ್ಯಾಯ ಒದಗಿಸಿಲ್ಲ. ಘಟನೆಯ ಸಂಪೂರ್ಣ ಲಾಭವನ್ನು ಜಿಲ್ಲೆಯ ಬಿಜೆಪಿಯ ಎಲ್ಲ ಎಂಎಲ್‌ಎಗಳು, ಎಂಪಿ ತೆಗೆದುಕೊಂಡಿದ್ದಾರೆ. ಈಗ ಬಾಯಿ ಮುಚ್ಚಿಕೊಂಡಿದ್ದಾರೆ. ಪ್ರತಿಭಟನೆ ನಡೆಸಿ ಕಾರ್ಯಕರ್ತರ ಮೇಲೆ ಕೇಸು ಹಾಕಿಸಿಕೊಂಡು ಇವರು ಗೆದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ, ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಇದೆ. ಸಿಬಿಐ ಬಿ ರಿಪೋರ್ಟ್ ಹಾಕುವುದೆಂದರೆ ನಾಚಿಕೆಗೇಡಿನ ಸಂಗತಿ. ತನಿಖೆಗಿಂತ ಮೊದಲು ಆಗಿನ ಜಿಲ್ಲಾಧಿಕಾರಿ ಸಹಜ ಸಾವು ಎಂದು ಹೇಗೆ ಹೇಳಿದರು? ಸ್ಥಳದಲ್ಲಿನ ಸಿಸಿ ಟಿವಿ ಕ್ಯಾಮೆರಾ ಬಂದ್ ಆಗಿತ್ತು. ಇದನ್ನೆಲ್ಲ ಗಮನಿಸಿ ಸಿಬಿಐ ಹೇಗೆ ಬಿ ರಿಪೋರ್ಟ್ ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ತರಂಜನ್ ಹತ್ಯೆಯಿಂದ ಪರೇಶ್ ಮೇಸ್ತಾನವರೆಗೆ ಭಟ್ಕಳ ತಾಲೂಕಿನಲ್ಲಿ 22 ಹಿಂದೂ ಕಾರ್ಯಕರ್ತರ ಕೊಲೆ ನಡೆದಿದೆ. ಒಂದಕ್ಕೂ ನ್ಯಾಯ ಸಿಕ್ಕಿಲ್ಲ. ಈ 22 ಕೊಲೆಗಳಿಗೆ ಪೊಲೀಸರು, ರಾಜಕಾರಣಿಗಳು ಜವಾಬ್ದಾರರು. ಯಮುನಾ ನಾಯ್ಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ವ್ಯವಸ್ಥಿತವಾಗಿ ಸಿಕ್ಕಿಸಿ ಹಾಕಿ ಏಳು ವರ್ಷ ಜೈಲು ಅನುಭವಿಸುವಂತೆ ಮಾಡಿದರು. ಕೊನೆಗೂ ನ್ಯಾಯಾಲಯ ಆತನನ್ನು ನಿರ್ದೋಷಿ ಎಂದು ತೀರ್ಪು ನೀಡಿತು ಎಂದು ಮುತಾಲಿಕ್ ಹೇಳಿದರು.
ಇದನ್ನೂ ಓದಿ : ಡಿಕೆಶಿ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಹೋರಾಟ: ಮುತಾಲಿಕ್ ಎಚ್ಚರಿಕೆ