ಕಾರವಾರ (ಉತ್ತರ ಕನ್ನಡ): ರಾಜ್ಯಾದ್ಯಂತ ಇಂದು ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಓಡಾಟಕ್ಕೆ ಬಸ್ಗಳೇ ಇಲ್ಲದೆ ಪರದಾಟ ನಡೆಸುವಂತಾಗಿದ್ದು, ಉಚಿತ ಪ್ರಯಾಣದ ಮುಂದೆ ಗ್ರಾಮೀಣ ಬಸ್ಗಳ ಸಮಸ್ಯೆ ಗೌಣವಾದಂತಾಗಿದೆ.
ಹೌದು, ಉತ್ತರ ಕನ್ನಡವು ಗುಡ್ಡಗಾಡು ಪ್ರದೇಶಗಳನ್ನ ಹೊಂದಿರುವ ಜಿಲ್ಲೆ. ನಗರ ಪ್ರದೇಶಗಳಿಗಿಂತ ಇಲ್ಲಿ ಗ್ರಾಮೀಣ ಪ್ರದೇಶದ ವಿಸ್ತಾರವೇ ಹೆಚ್ಚು. ಹೀಗಾಗಿ ಗ್ರಾಮೀಣ ಭಾಗಗಳಿಗೆ ಓಡಾಡುವ ಸಾರಿಗೆ ಬಸ್ಗಳೇ ಇಲ್ಲಿ ಜನರ ಜೀವನಾಡಿಯಾಗಿದೆ. ಆದರೆ ಕಳೆದ ಕೋವಿಡ್ ಕಾರಣದಿಂದ ಸಂಚಾರ ರದ್ದಾಗಿದ್ದ ಬಹುತೇಕ ಗ್ರಾಮೀಣ ಬಸ್ಗಳು ಈವರೆಗೂ ಸಂಚಾರ ಆರಂಭಿಸಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
ಕೋವಿಡ್ ಸಾಂಕ್ರಾಮಿಕ ಕಾಲ ಕಳೆದು ಬಹುತೇಕ ಎಲ್ಲಾ ಕ್ಷೇತ್ರಗಳು ಮೊದಲಿನಂತಾಗಿದೆ. ಆದರೆ ಸಾರಿಗೆ ವ್ಯವಸ್ಥೆ ಮಾತ್ರ ಮೊದಲಿಗಿಂತಲೂ ಹದಗೆಟ್ಟಿದೆ. ಇದು ಗ್ರಾಮೀಣ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೂ ತೊಡಕುಂಟು ಮಾಡಿದೆ. ಇನ್ನು ಈ ಬಗ್ಗೆ ಸಾರಿಗೆ ಅಧಿಕಾರಿಗಳನ್ನು ಕೇಳಿದರೆ, ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಹೊಸ ಬಸ್ಗಳ ಖರೀದಿ ಕೂಡ ನಡೆದಿಲ್ಲ. ಹೀಗಾಗಿ ಈ ಸಮಸ್ಯೆ ಉಂಟಾಗಿದೆ ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಉಚಿತ ಪ್ರಯಾಣದ ಸೌಲಭ್ಯ ನೀಡುತ್ತಿರುವುದು ನಿಜಕ್ಕೂ ಉತ್ತಮ ವಿಚಾರವೇ ಸರಿ. ಆದರೆ ಅದಕ್ಕೂ ಮುನ್ನ ಸಾರಿಗೆ ಇಲಾಖೆಯನ್ನ ಬಲಪಡಿಸುವ ಕಾರ್ಯವಾಗಬೇಕಿದೆ. ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆಗಳನ್ನು ಬಗೆಹರಿಸುವಲ್ಲೂ ಸರ್ಕಾರ ಗಮನಹರಿಸಬೇಕಿದೆ.
ಶಕ್ತಿ ಯೋಜನೆಗೆ ಸಿಎಂ ಚಾಲನೆ: ರಾಜ್ಯದ ಎಲ್ಲಾ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ಯೋಜನೆಯ ಉದ್ಘಾಟನಾ ಸಮಾರಂಭವು ವಿಧಾನಸೌಧದ ಮುಂಭಾಗದಲ್ಲಿ ನಡೆದಿದೆ.
ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಜಾರಿಯಾಗಿರುವ ಮೊದಲನೆಯ ಯೋಜನೆ ಇದಾಗಿದೆ. ರಾಜ್ಯಾದ್ಯಾಂತ ಏಕಕಾಲಕ್ಕೆ ಶಕ್ತಿ ಯೋಜನೆ ಉದ್ಘಾಟನೆಗೊಂಡಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶಾಸಕರು ಚಾಲನೆ ನೀಡಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆಯಿಂದ ಎಲ್ಲಾ ಮಹಿಳೆಯರಿಗೆ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಈ ಯೋಜನೆಯಿಂದ ಪ್ರತಿದಿನ 41.8 ಮಹಿಳೆಯರಿಗೆ ಅನುಕೂಲವಾಗಲಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಮತ್ತು ಎನ್ಇಕೆಆರ್ಟಿಸಿ ಬಸ್ಗಳಲ್ಲಿ ಸೌಲಭ್ಯ ಒದಗಿಸಲಾಗಿದೆ. ಈ ಯೋಜನೆಗೆ ವಾರ್ಷಿಕವಾಗಿ 4051.56 ಕೋಟಿ ರೂಪಾಯಿ ವೆಚ್ಚವಾಗುವುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: DK Shivakumar: ಮಧ್ಯಪ್ರದೇಶದ ಸಾಂಪ್ರದಾಯಿಕ ಕಲರ್‌ಫುಲ್ ಪೇಟ ಧರಿಸಿ ಡಿಸಿಎಂ ಡಿಕೆಶಿ ಭಾಷಣ- ವಿಡಿಯೋ