ಶಿರಸಿ: ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ (ನ.18)ರಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಶಿವರಾಮ ಹೆಬ್ಬಾರ್ ತಮ್ಮ ನಾಮಪತ್ರ ಸಲ್ಲಿಸಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಟಕ್ಕರ್ ನೀಡಲು 5 ಸಾವಿರಕ್ಕೂ ಅಧಿಕ ಬೆಂಬಲಿಗರನ್ನು ಸೇರಿಸಿ ಉಮೇದುವಾರಿಕೆ ಸಲ್ಲಿಸಲು ತಯಾರಿ ನಡೆಸಿದ್ದಾರೆ.
ಬಿಜೆಪಿಗೆ ಸೇರಿದ ನಂತರ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗದಲ್ಲಿ ಸಭೆಗಳನ್ನು ನಡೆಸಿ ತಮ್ಮ ಕಾರ್ಯಕರ್ತರನ್ನೂ ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಬಂಧುಗಳು, ಕಾರ್ಯಕರ್ತರು ಬೆಂಬಲ ನೀಡಬೇಕು ಎಂದು ಸೋಶಿಯಲ್ ಮೀಡಿಯಾ ಮೂಲನ ಮನವಿ ಮಾಡಿದ್ದಾರೆ. ಮಧ್ಯಾಹ್ನ 11ಗಂಟೆಗೆ ಹೆಬ್ಬಾರ್ ನಾಮಪತ್ರ ಸಲ್ಲಿಸಲಿದ್ದು, ವೈಟಿಎಸ್ಎಸ್ ಹೈಸ್ಕೂಲ್ ಮೈದಾನದಿಂದ ತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ತೆರಳಿದ್ದಾರೆ.
ರಾಜ್ಯ ನಾಯಕರು ಭಾಗಿ:
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಹರತಾಳ ಹಾಲಪ್ಪ, ಕುಮಾರ ಬಂಗಾರಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಪಾಲ್ಗೊಳ್ಳಲಿದ್ದಾರೆ.
ಜೆಡಿಎಸ್ ನಾಮಪತ್ರ:
ಜೆಡಿಎಸ್ ಅಭ್ಯರ್ಥಿಯಾಗಿ ಚೈತ್ರಾ ಗೌಡ ಸಹ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಜೆಡಿಎಸ್ ಮಹಿಳಾ ಘಟಕದಲ್ಲಿ ಮುಂಚೂಣಿ ಪದಾಧಿಕಾರಿಯಾಗಿ ಕೆಲಸ ಮಾಡಿರುವ ಅವರು, ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಪ್ರಾದೇಶಿಕ, ಪಕ್ಷೇತರ ಸೇರಿದಂತೆ ನಾಲ್ಕಾರು ಅಭ್ಯರ್ಥಿಗಳು ಇದೇ ದಿನ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.
ಕಾಂಗ್ರೆಸ್ ಗೆ ಶಾಕ್?:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕಗೆ ಯಲ್ಲಾಪುರ ಟಿಕೆಟ್ ಘೋಷಣೆ ಮಾಡಿರುವ ಕಾರಣ, ಮುಂಡಗೋಡಿನ ಕಾಂಗ್ರೆಸ್ ಯುವ ಮುಖಂಡ ಬನ್ಸೋಡೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಕಾಂಗ್ರೆಸ್ಗೆ ಬಂಡಾಯದ ಶಾಕ್ ನೀಡಲಿದ್ದಾರೆ.