ಕಾರವಾರ (ಉ.ಕ): ದಕ್ಷಿಣಕಾಶಿ ಎಂದೇ ಖ್ಯಾತಿ ಪಡೆದಿರುವ ಶಿವನ ಆತ್ಮಲಿಂಗವಿರುವ ಏಕೈಕ ತಾಣ ಅಂದರೆ ಅದು ಗೋಕರ್ಣ. ಮಿರ್ಜಾನ್ ಕೋಟೆ ಸೇರಿದಂತೆ ಐತಿಹಾಸಿಕ ಕುರುಹುಗಳನ್ನು ನೆನಪಿಸುವ ತಾಣಗಳು ಜಿಲ್ಲೆಯ ಹಲವೆಡೆ ಕಾಣಸಿಗುತ್ತವೆ.
ಆದರೆ ಐತಿಹಾಸಿಕ ಮಹತ್ವ ಪಡೆದಿರುವ ಸಾಕಷ್ಟು ತಾಣಗಳು ಸೂಕ್ತ ರಕ್ಷಣೆ ಇಲ್ಲದೇ ನಶಿಸಿ ಹೋಗುತ್ತಿದ್ದು ಇದಕ್ಕೆ ಸಾಕ್ಷಿ ಎನ್ನುವಂತೆ ಪುರಾತನ ಕಾಲದ ಶಿವನ ದೇವಾಲಯಗಳು ಕೇಳುವವರಿಲ್ಲದೇ ಅರಣ್ಯ ಪ್ರದೇಶದಲ್ಲೇ ಹುದುಗಿ ಹೋಗುತ್ತಿರುವುದು ದುರಂತವೇ ಸರಿ.
ಅಂಕೋಲಾ ತಾಲೂಕಿನ ಮಾರುಗದ್ದೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸುಮಾರು 11ನೇ ಶತಮಾನದ್ದು ಎನ್ನಲಾಗುವ 4 ದೇವಾಲಯಗಳಿದ್ದು ಇವು ಯಾವುದೇ ರಕ್ಷಣೆ ಇಲ್ಲದೇ ಪಾಳುಬಿದ್ದಿವೆ. 11ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಆಡಳಿತಾವಧಿಯಲ್ಲಿ ನಿರ್ಮಿಸಿದಂತಿರುವ ಈ ಶಿವನ ದೇವಾಲಯಗಳಲ್ಲಿ ಒಂದು ದೇವಸ್ಥಾನ ಬಾದಾಮಿಯಲ್ಲಿನ ದೇವಸ್ಥಾನದಂತೆ ಕಲಾಕೃತಿಗಳನ್ನು ಹೊಂದಿದೆ. ಈ ದೇವಸ್ಥಾನದ ಕಲ್ಲಿನ ಗೋಡೆಗಳ ಮೇಲಿನ ಕೆತ್ತನೆಗಳು ಮನೋಜ್ಞವಾಗಿದ್ದು ಕಲ್ಲುಗಳಲ್ಲಿ ಮೂಡಿರುವ ಶಿವ, ವೀರಭದ್ರ, ದುರ್ಗೆ ಸೇರಿದಂತೆ ಹಲವು ಕಲಾಕೃತಿಗಳು ಅಂದಿನ ಶಿಲ್ಪಕಲೆಯನ್ನ ಸಾರುವಂತಿವೆ.
ದೇವಸ್ಥಾನದ ಕಂಭಗಳು ಸಹ ಶಿಲಾಮಯವಾಗಿದ್ದು ಕಲ್ಯಾಣಿ ಚಾಲುಕ್ಯರ ಶೈಲಿಯ ಈ ದೇವಸ್ಥಾನ ಎಂತಹವರನ್ನೂ ಮನಸೂರೆಗೊಳ್ಳುತ್ತದೆ. ಆದರೆ ಅರಣ್ಯ ಪ್ರದೇಶದಲ್ಲಿರುವ ದೇವಾಲಯಗಳು ಮಳೆಯಿಂದಾಗಿ ಸಾಕಷ್ಟು ಹಾನಿಗೊಳಗಾಗಿದ್ದು ಸೂಕ್ತ ರಕ್ಷಣೆ ಇಲ್ಲದಿರುವುದರಿಂದ ಐತಿಹಾಸಿಕ ಮಹತ್ವವಿರುವ ಪುರಾತನ ದೇವಸ್ಥಾನಗಳು ನಾಶವಾಗುವ ಹಂತ ತಲುಪಿವೆ.
ಇತಿಹಾಸಕಾರರ ಪ್ರಕಾರ, ಈ ದೇವಸ್ಥಾನಗಳು 11-12ನೇ ಶತಮಾನದ್ದು ಆಗಿರಬಹುದೆಂದು ಹೇಳಲಾಗುತ್ತಿದೆ. ಹಾಗೆಯೇ ಈ ದೇವಸ್ಥಾನದ ಸುತ್ತಮುತ್ತ ಅಗ್ರಹಾರ ಹಾಗೂ ಹಿಂದೆ ಜನವಸತಿ ಇದ್ದ ಕುರುಹುಗಳಿದ್ದು ಕಲ್ಯಾಣಿ ಚಾಲುಕ್ಯರ ಕಾಲದ ಗತವೈಭವವನ್ನು ಸಾರುವಂತಿವೆ. ಆದರೆ ಇಷ್ಟೊಂದು ಮಹತ್ವ ಇರುವ ಈ ದೇವಸ್ಥಾನ ಈಗ ಪಾಳು ಬಿದ್ದಿದು, ಪುರಾತತ್ವ ಇಲಾಖೆಯಾಗಲೀ, ಸ್ಥಳೀಯ ಆಡಳಿತವಾಗಲೀ ಇತ್ತ ಗಮನಹರಿಸುತ್ತಿಲ್ಲ.
ಈ ಹಿಂದೆ 2019ರಲ್ಲಿ ಉಂಟಾದ ಪ್ರವಾಹಕ್ಕೆ ಇಲ್ಲಿನ ವಿಗ್ರಹಗಳ ಪೈಕಿ ಹಲವು ಮಣ್ಣಿನಲ್ಲಿ ಮುಚ್ಚಿಹೋಗಿವೆ. ಹೀಗಾಗಿ ಈ ಗ್ರಾಮದ ಜನರು ಪುರಾತತ್ವ ಹಾಗೂ ಮುಜರಾಯಿ ಇಲಾಖೆ ಇವುಗಳನ್ನು ರಕ್ಷಿಸಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಕುಗ್ರಾಮವಾಗಿರುವ ಮಾರುಗದ್ದೆ ಸಹ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ ಅನ್ನೋದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: 5 ಕಿ.ಮೀ ದೂರ ಜೋಲಿಯಲ್ಲಿ ಹೊತ್ತು ರೋಗಿಯ ಸಾಗಾಟ; ತುರ್ತುಸೇವೆಗೆ ವರೀಣಬೇಣಾ ಗ್ರಾಮಸ್ಥರ ಪರದಾಟ