ಕಾರವಾರ: ಸರಣಿಗಳ್ಳತನದ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಪೊಲೀಸರ ನಿದ್ದೆಗೆಡಿಸಿದ್ದ ನಾಲ್ವರು ಖದೀಮರನ್ನು ಕೊನೆಗೂ ಅಂಕೋಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾನಗಲ್ ಮೂಲದ ಇಮ್ರಾನ್ ಮಕಬುಲ್ ಬ್ಯಾಡಗಿ (23), ಮುಬಾರಕ್ ಅಬ್ದುಲ್ ಮುನಾಫಸಾಬ್ ಶೇಖ್ (21), ಬಸವರಾಜ್ ಅಲಿಯಾಸ್ ಆಕಾಶ ನಾಗಪ್ಪ ವಡ್ಡರ್(23) ಮಲ್ಲಿಕ್ ಜಾನ್ ಅಲಿಯಾಸ ಮಲ್ಲಿಕ್ ಅಬ್ದುಲ್ ರಜಾಕ್ ದೊಡ್ಮನಿ(19) ಬಂಧಿತರು. ಅಂಕೋಲಾ ತಾಲೂಕಿನ ವಿವಿಧೆಡೆ ಕಳೆದ ಕೆಲ ದಿನಗಳಿಂದ ಸರಣಿ ಕಳ್ಳತನ ನಡೆದಿತ್ತು. ಅದರಂತೆ ಹುಲಿ ದೇವರವಾಡದ ರಿಯಾ ನಿಲಯದಲ್ಲಿ ನಡೆದ ಕಳ್ಳತನದ ಜಾಡು ಹಿಡಿದ ಪೊಲೀಸರು ಎಸ್ಪಿ ಶಿವಪ್ರಕಾಶ್ ದೇವರಾಜು ಮಾರ್ಗದರ್ಶನದಲ್ಲಿ ಅಂಕೋಲಾ ಠಾಣೆಯ ಪಿಎಸ್ಐ ಇ.ಸಿ ಸಂಪತ್ ಅವರ ಚಾಣಾಕ್ಷತನದಿಂದ ಕೊನೆಗೂ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಪೈಯರ್ ಹೋಲ್ ಮಷಿನ್, ಜಿಯೋ ವೈಫೈ, ಹುಂಡೈ ಕಂಪನಿಯ ಐ-20 ಕಾರ್, 20,500 ರೂ. ನಗದು ಸೇರಿ ಒಟ್ಟು 3,72,100 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.