ಕಾರವಾರ: ಶಾಲೆಯಿಂದ ವರ್ಗಾವಣೆಗೊಂಡ ಪ್ರೀತಿಯ ಶಿಕ್ಷಕಿಯನ್ನು ಬೀಳ್ಕೊಡಲು ಆ ಪುಟ್ಟ ಮಕ್ಕಳಿಗೆ ಮನಸ್ಸಿರಲಿಲ್ಲ. ಕಣ್ಣೀರು ಹಾಕುತ್ತಾ ಒಲ್ಲದ ಮನಸ್ಸಿನಿಂದ ಶಿಕ್ಷಕಿಯನ್ನು ಬೀಳ್ಕೊಟ್ಟ ಘಟನೆ ಜಿಲ್ಲೆಯ ಅಂಕೋಲಾ ತಾಲೂಕಿನ ಉಳವರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ ಕಳೆದ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ನಮೃತಾ ಬಿ. ನಾಯಕ ತಾಲೂಕಿನ ಕೃಷ್ಣಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಇಂದು ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಊರ ನಾಗರಿಕರು ಪ್ರೀತಿಯ ಶಿಕ್ಷಕಿಯನ್ನು ಕಳುಹಿಸಿಕೊಡಲು ಇಷ್ಟವಿಲ್ಲದೆ ಬಿಕ್ಕಿ ಬಿಕ್ಕಿ ಅಳತೊಡಗಿದರು.
ನಮೃತ್ ಬಿ. ನಾಯಕ ಅವರು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ. ಅಲ್ಲದೆ ಬಹುಮುಖ ಪ್ರತಿಭೆಯುಳ್ಳವರು. ಎಲ್ಲ ಮಕ್ಕಳನ್ನು ತನ್ನ ಮಕ್ಕಳಂತೆಯೇ ಪ್ರೀತಿಸುತ್ತಾ, ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ಸದಾ ಉತ್ತೇಜನ ನೀಡಿ ಉನ್ನತ ಮಟ್ಟಕ್ಕೆ ಬರಲು ಬಹಳ ಕಾಳಜಿ ವಹಿಸುತ್ತಿದ್ದರು. ಇಂತಹ ಪ್ರೀತಿಯ ಶಿಕ್ಷಕರನ್ನು ಬೀಳ್ಕೊಡುವುದು ಎಲ್ಲರಿಗೂ ಕಷ್ಟವಾಗಿತ್ತು.