ಕಾರವಾರ: ರಾಜ್ಯದ ಕರಾವಳಿಯಲ್ಲಿ ಮುಂಗಾರು ಕಾಲಿಡುವ ಮುನ್ನವೇ ವಾರಗಳ ಕಾಲ ಅಬ್ಬರಿಸಿದ್ದ ನಿಸರ್ಗ ಚಂಡಮಾರುತ ಅಂಕೋಲಾದಲ್ಲಿ ಅನಾಹುತವನ್ನೇ ಸೃಷ್ಟಿಸಿದೆ. ಅಲೆಗಳ ಆರ್ಭಟಕ್ಕೆ ತಡೆಗೋಡೆ, ರಸ್ತೆ ಕೊಚ್ಚಿ ಹೋಗಿದ್ದು, ಇದೀಗ ಕಡಲತೀರದ ನಿವಾಸಿಗಳ ನಿದ್ದೆಗೆಡುವಂತೆ ಮಾಡಿದೆ.
ಅಂಕೋಲಾ ತಾಲೂಕಿನ ಖೇಣಿ ಗ್ರಾಮದ ಗಾಬಿತಖೇಣಿಯಲ್ಲಿ ಈಗಾಗಲೇ ಕಡಲಕೊರೆತ ಪ್ರಾರಂಭವಾಗಿದೆ. ಕಳೆದ ಸೆಪ್ಟೆಂಬರ್ ವೇಳೆಗೆ ಈ ಭಾಗದಲ್ಲಿ ಕಡಲ ಕೊರೆತ ಉಂಟಾಗಿದ್ದು, ಕಡಲತೀರದ ಪಕ್ಕಕ್ಕೆ ಹಾಕಲಾಗಿದ್ದ ತಡೆಗೋಡೆಗೆ ಅಲ್ಪಪ್ರಮಾಣದಲ್ಲಿ ಹಾನಿಗೊಳಗಾಗಿತ್ತು. ಈ ವೇಳೆ, ಸ್ಥಳೀಯ ನಿವಾಸಿಗಳು ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದು, ಆದಷ್ಟು ಬೇಗ ತಡೆಗೋಡೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು.
ಆದ್ರೆ, ಈವರೆಗೂ ಯಾರೊಬ್ಬರೂ ಇತ್ತ ತಲೆಹಾಕಿರಲಿಲ್ಲ. ಆದರೆ, ವಾರದ ಹಿಂದೆ ಅಬ್ಬರಿಸಿದ ನಿಸರ್ಗ ಚಂಡಮಾರುತಕ್ಕೆ ರಸ್ತೆ, ತಡೆಗೋಡೆ ಕೊಚ್ಚಿ ಹೋಗಿದೆ. ಮಾನ್ಸೂನ್ ಪ್ರಾರಂಭಕ್ಕೂ ಮುನ್ನವೇ ಇಷ್ಟೊಂದು ಅನಾಹುತ ಸೃಷ್ಟಿಯಾಗಿರುವುದು ಮುಂದೆ ಹೇಗೆ ಎಂಬ ಚಿಂತೆ ಸ್ಥಳೀಯರನ್ನು ಕಾಡತೊಡಗಿದೆ. ಆದ್ದರಿಂದ ತಕ್ಷಣ ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವಂತೆ ಇಲ್ಲಿನ ನಿವಾಸಿಗಳು ಕೇಳಿಕೊಳ್ಳುತ್ತಿದ್ದಾರೆ.
ಖೇಣಿ ಗ್ರಾಮದ ಗಾಬಿತಖೇಣಿದಲ್ಲಿ ಸುಮಾರು 150ಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದು, ಕಡಲತೀರ ಸಮೀಪದಲ್ಲೇ ಸಾಕಷ್ಟು ಮನೆಗಳಿವೆ. ಹಲವರು ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಕಡಲನ್ನು ಅವಲಂಬಿಸಿಯೇ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ತಮ್ಮ ಬೋಟು, ಬಲೆಗಳನ್ನು ನೋಡಿಕೊಳ್ಳಲು ಕಡಲತೀರದಲ್ಲೇ ಇರಬೇಕಾದ ಅನಿವಾರ್ಯತೆ ಇದೆಯಾದ್ರೂ ಕಡಲಕೊರೆತದಿಂದಾಗಿ ಆತಂಕದಲ್ಲೇ ದಿನ ಕಳೆಯುವಂತಾಗಿದೆ.
ಇನ್ನು ಈ ಬಗ್ಗೆ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ್ ಮೂಲಕ ಮೀನುಗಾರಿಕಾ ಸಚಿವರಿಗೆ ಸ್ಥಳೀಯರು ಮನವಿ ಮಾಡಿದ್ದು, ಈ ಹಿನ್ನೆಲೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಇಲ್ಲಿನ ಅಲೆ ತಡೆಗೋಡೆ ಹಾಗೂ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕಾಗಿ 17.5 ಕೋಟಿ ವೆಚ್ಚದ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಮಳೆಗಾಲದಲ್ಲಿ ತೊಂದರೆಯಾಗದ ನಿಟ್ಟಿನಲ್ಲಿ ತುರ್ತಾಗಿ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಸಚಿವ ಪೂಜಾರಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕಡಲನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡ ಕುಟುಂಬಗಳಿಗೆ ಇದೀಗ ಕಡಲ ಕೊರೆತದ ಆತಂಕ ಪ್ರಾರಂಭವಾಗಿದ್ದು, ಸರ್ಕಾರ ಆದಷ್ಟು ಬೇಗ ತೀರ ಪ್ರದೇಶಗಳಲ್ಲಿ ಸೂಕ್ತ ಅಲೆ ತಡೆಗೋಡೆ ನಿರ್ಮಿಸುವ ಮೂಲಕ ಇಲ್ಲಿನ ನಿವಾಸಿಗಳ ಆತಂಕ ದೂರ ಮಾಡಬೇಕಾಗಿದೆ.