ಕಾರವಾರ: ಮಂಗಳೂರು ಸೇರಿದಂತೆ ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿ ಪ್ರತಿಭಟನೆಗೆ ಮುಂದಾದವರ ಮೇಲಿನ ಪೊಲೀಸ್ ದೌರ್ಜನ್ಯ ಪೂರ್ವನಿಯೋಜಿತ ಕೃತ್ಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ) ಪಕ್ಷದ ಮುಖಂಡ ಇಲಿಯಾಸ್ ತುಂಬೆ ಆರೋಪಿಸಿದ್ದಾರೆ.
ಕಾರವಾರದಲ್ಲಿ ಮಾತನಾಡಿ, ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಾಗರಿಕರು ಪ್ರತಿಭಟಿಸುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ದೆಹಲಿಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಬೀದಿಗಿಳಿದಿದ್ದಾರೆ. ವಿಪರ್ಯಾಸ ಅಂದರೆ ಕೇಂದ್ರ ಸರ್ಕಾರಕ್ಕೆ ಕಣ್ಣು ಕಿವಿ ಎರಡು ಸರಿಯಾಗಿಲ್ಲ. ಹೀಗಾಗಿ ಪ್ರತಿಭಟನಾಕರರ ಕೂಗು ಕೇಳುತ್ತಿಲ್ಲ ಎಂದರು.
ಮಂಗಳೂರಿನಲ್ಲಿ ತರಾತುರಿಯಲ್ಲಿ ರಾತ್ರಿ ವೇಳೆ ಸೆಕ್ಷನ್ 144ನ್ನು ಜಾರಿ ಮಾಡಿದ್ದರು. ಮೊದಲೇ ಅನುಮತಿ ಪಡೆದುಕೊಂಡಿದ್ದರಿಂದ ಹಿಂದಿನ ದಿನ ರಾತ್ರಿ ನಿಷೇಧಾಜ್ಞೆ ಜಾರಿ ಮಾಡಿದ್ದು ಪ್ರತಿಭಟನಾಕಾರರಿಗೆ ಗೊತ್ತಿರಲಿಲ್ಲ. ಹೀಗಾಗಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಸಿಂಡಿಕೇಟ್ ಬ್ಯಾಂಕ್ ವೃತ್ತದಲ್ಲಿ ನಿಂತಿದ್ದ ಅಮಾಯಕರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನೆಗೆ ಬಂದವರು ಕಲ್ಲು ತೂರಾಟ ಮಾಡದೇ ಬೇರೆ ದಾರಿ ಇರಲಿಲ್ಲ ಎಂದು ಸಮರ್ಥಿಸಿಕೊಂಡರು. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಪ್ರತಿಭಟನೆಗಳಲ್ಲಿ ಲಾಠಿಚಾರ್ಜ್, ಗೋಲಿಬಾರ್ ಉಂಟಾಗಿವೆ. ಇದರಿಂದಾಗಿ ಸಾವಿರಾರು ಮಂದಿ ಆಸ್ಪತ್ರೆ ಸೇರುವಂತಾಗಿದೆ. ಇತರ ರಾಜ್ಯಗಳಲ್ಲಿ ಪ್ರತಿಭಟನೆಗಳು ಶಾಂತ ರೀತಿಯಿಂದ ನಡೆದಿವೆ ಎಂದು ಹೇಳಿದರು. ಒಂದು ಸಮುದಾಯದವರನ್ನು ಗುರಿಯಾಗಿಸಿ ಕಾಯ್ದೆ ಜಾರಿಗೆ ತರಲಾಗಿದೆ. ಇದರಿಂದ ನಮ್ಮ ಅಸ್ತಿತ್ವದ ದಾಖಲೆ ತೋರಿಸುವುದು ಸಾಧ್ಯವಿಲ್ಲ. ಕಾಯ್ದೆ ಹಿಂದೆ ಪಡೆಯದೆ ಇದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.