ಕಾರವಾರ/ಧಾರವಾಡ: ಉತ್ತರಕನ್ನಡ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕೊವಿಡ್ ಮುಂಜಾಗೃತಾ ಕ್ರಮಗಳೊಂದಿಗೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿದ್ದು, ಮಕ್ಕಳು ಕೂಡ ಉತ್ಸಾಹದಿಂದಲೇ ತರಗತಿಗಳತ್ತ ಹೆಜ್ಜೆ ಹಾಕಿದರು.
ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಶಾಲಾ ಕಾಲೇಜುಗಳನ್ನು ಕೊನೆಗೂ ಸರ್ಕಾರ ಕೋವಿಡ್ ಮುಂಜಾಗೃತೆಯೊಂದಿಗೆ ತೆರೆಯಲು ಅನುಮತಿಸಿದೆ.
ಉತ್ತರಕನ್ನಡ:
ಶೇ.0.85 ಕೊರೊನಾ ಪಾಸಿಟಿವಿಟಿ ಹೊಂದಿರುವ ಜಿಲ್ಲೆಯಲ್ಲಿ ಉತ್ತರಕನ್ನಡದ 189, ಶಿರಸಿ ಶೈಕ್ಷಣಿಕ ಜಿಲ್ಲೆಯ 175 ಪ್ರೌಢಶಾಲೆ ಹಾಗೂ 99 ಪದವಿ ಪೂರ್ವ ಕಾಲೇಜುಗಳ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದರಂತೆ ಇಂದು ಕಾರವಾರದಲ್ಲಿ ಬೆಳಗ್ಗೆ ಖುಷಿಯಿಂದಲೇ ಶಾಲೆಯತ್ತ ಹೆಜ್ಜೆ ಹಾಕಿದ್ದ ಮಕ್ಕಳನ್ನು ಕೆಲ ಪ್ರೌಢಶಾಲೆಗಳಲ್ಲಿ ಮಾವಿನ ತೋರಣ ಕಟ್ಟಿ ಸ್ವಾಗತ ಕೋರುವ ಬ್ಯಾನರ್ಗಳ ಮೂಲಕ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.
ಮಾತ್ರವಲ್ಲದೆ, ಎಲ್ಲ ಶಾಲಾ ಕಾಲೇಜುಗಳಲ್ಲಿ ಮಕ್ಕಳು ತರಗತಿ ಸೇರುವ ಮುನ್ನ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಮಾಡಿ ಮಾಸ್ಕ್ ಕಡ್ಡಾಯವಾಗಿ ಹಾಕಿಸಿ ತರಗತಿಗಳಿಗೆ ಕಳುಹಿಸಲಾಯಿತು. ತರಗತಿಗಳಲ್ಲಿಯೂ ಕೂಡ ಕೇವಲ 20 ಮಂದಿಗೆ ಮಾತ್ರ ಅವಕಾಶ ನೀಡಿದ್ದು, ಉಳಿದವರನ್ನು ಬೇರೆ ತರಗತಿಗಳಲ್ಲಿ ಕೂರಿಸಿ ಪಾಠ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಕೆಲ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕವೂ ಕೂಡ ಪಾಠ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರವಾಡ:
ನಗರದ ಪ್ರೆಸೆಂಟೇಷನ್ ಶಾಲೆಗೆ ಆಗಮಿಸಿದ ಡಿಡಿಪಿಐ ಹಂಚಾಟೆ ಅವರು ಸರ್ಕಾರ ಹಾಗೂ ಇಲಾಖೆ ಕೈಗೊಂಡ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಬಳಿಕ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಿ ಶುಭ ಕೋರಿದರು.
ಧಾರವಾಡ ಜಿಲ್ಲೆಯ ಒಟ್ಟು 416 ಪ್ರೌಢ ಶಾಲೆಗಳಲ್ಲಿ 9,10ನೇ ತರಗತಿ ಪ್ರಾರಂಭವಾಗಿವೆ. 9ನೇ ತರಗತಿಗೆ 30,464 ವಿದ್ಯಾರ್ಥಿಗಳು 10ನೇ ತರಗತಿಗೆ 33,137 ವಿದ್ಯಾರ್ಥಿಗಳಿದ್ದಾರೆ.
110 ಖಾಸಗಿ, 39 ಅನುದಾನಿತ, 27 ಸರ್ಕಾರಿ ಪಿಯು ಕಾಲೇಜುಗಳಲ್ಲಿ ತರಗತಿ ಆರಂಭಗೊಂಡಿವೆ. ಬೆಳಗ್ಗೆಯಿಂದ ತುಂಬಾ ಉತ್ಸುಕತೆಯಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಆಗಮಿಸಿದ್ದಾರೆ.