ಭಟ್ಕಳ: ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್, ಲಾಕ್ಡೌನ್ ಸಮಯದಲ್ಲಿ ಮನೆ ಮನೆಗೆ ತೆರಳಿ ಜನರ ಆರೋಗ್ಯದ ಮಾಹಿತಿ ಪಡೆಯುವ ಕೆಲಸ ಮಾಡಿದ್ದ ಆಶಾ ಕಾರ್ಯಕರ್ತೆಯರಿಗೆ ತಲಾ ಎರಡು ಸೀರೆಯನ್ನು ಪಕ್ಷದ ವತಿಯಿಂದ ಮೂಲಕ ವಿತರಿಸಿದರು.
ಭಟ್ಕಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ತಾಯಿ, ಮಕ್ಕಳ ಆರೋಗ್ಯದ ಮೇಲೆ ನಿಗಾ ಇರಿಸುವಂತೆ ಆಶಾ ಕಾರ್ಯಕರ್ತೆಯರು ಕೋವಿಡ್ ಸೋಂಕಿತರ ಆರೋಗ್ಯದ ಕಾಳಜಿ ವಹಿಸಿದ್ದಾರೆ. ಸಮಾಜ ಆರೋಗ್ಯವಾಗಿರಲು ಪ್ರಮುಖ ಕೆಲಸ ನಿಮ್ಮದಾಗಿದೆ. ನಿಮ್ಮ ಸೇವೆಗೆ ಇದು ಚಿಕ್ಕ ಗೌರವವಾಗಿದೆ. ಆದರೆ ನಮ್ಮಿಂದ ನಿಮಗೆ ಗೌರವ ನೀಡಬೇಕಾಗಿರುವುದು ನಮ್ಮ ಕರ್ತವ್ಯ ಮತ್ತು ಮಾನವೀಯತೆ ಅಂಶವಾಗಿದೆ ಎಂದರು.
ಆಶಾ ಕಾರ್ಯಕರ್ತೆಯರ ಪರವಾಗಿ ಮಾತನಾಡಿದ ಆಶಾ ಕಾರ್ಯಕರ್ತೆ ಗೀತಾ ಗಣಪತಿ ನಾಯ್ಕ ಶಿರಾಲಿ, ಕೋವಿಡ್ ಸಮಯದಲ್ಲಿ ಮಾಡಿದ ಕೆಲಸ ನೋಡಿ ನಮ್ಮಲ್ಲರಿಗೂ ಸೀರೆ ವಿತರಿಸಿರುವುದು ಸಂತಸವಾಗಿದೆ. ನಮ್ಮ ಕೆಲಸದ ಬಗ್ಗೆ ಯಾರಲ್ಲಿಯೂ ಸಹ ಹೆಚ್ಚಿನ ಅರಿವಿರಲಿಲ್ಲ. ಆರೋಗ್ಯ ಸಮೀಕ್ಷೆ ಸಮಯದಲ್ಲಿ ಸರಿಯಾದ ಮಾಹಿತಿ ನೀಡದೆ ಬೈದು ವಾಪಸ್ ಕಳುಹಿಸಿ ಅವಮಾನಿಸಿರುವವರ ಮಧ್ಯೆ ಸಮಾಜದ ಹಿತಕ್ಕಾಗಿ ಸೇವೆ ಮಾಡುತ್ತಿರುವ ವಿಚಾರ ಗಮನದಲ್ಲಿಟ್ಟುಕೊಂಡು ಯಾವುದೇ ಬೇಸರವಿಲ್ಲದೆ ಕೆಲಸ ಮಾಡುತ್ತಾ ಬಂದಿದ್ದೇವೆ. ನಮ್ಮ ಸೇವೆ ಎಲ್ಲರಿಗೂ ತಲುಪಬೇಕೆಂಬ ಉದ್ದೇಶ ಇದ್ದು, ಜನರು ನಮ್ಮ ಕಾರ್ಯಕ್ಕೆ ಬೆಂಬಲ ನೀಡುತ್ತಿಲ್ಲ. ಚಿಕ್ಕ ಜ್ವರಕ್ಕೆ ಜನರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಮ್ಮಿಂದಾಗುವ ಕೆಲಸಕ್ಕೆ ತಕ್ಕಂತೆ ಸಂಬಳ ಸಿಗದಿರುವುದು ಬೇಸರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ಪಕ್ಷದ್ದಾಗಿದ್ದು, ನಮ್ಮ ಬಗ್ಗೆ ಗಮನ ನೀಡಿ ಸೇವಾ ಭದ್ರತೆ ನೀಡಬೇಕೆಂದು ಕೋರಿದರು.