ಕಾರವಾರ: ಕಡಲನಗರಿ ಕಾರವಾರದಲ್ಲಿ ಮರಳುಗಾರಿಕೆಗೆ ಬ್ರೇಕ್ ಬಿದ್ದು, ಮೂರು ವರ್ಷಗಳು ಕಳೆದಿವೆ. ಪರಿಣಾಮ ಕಟ್ಟಡ ಕಾಮಗಾರಿಗಳು ಅಪೂರ್ಣಗೊಂಡಿದ್ದರೆ ಸರ್ಕಾರದ ವಸತಿ ಯೋಜನೆಯ ಫಲಾನುಭವಿಗಳು ಪರದಾಟ ನಡೆಸುತ್ತಿದ್ದಾರೆ. ಆದ್ದರಿಂದ ಮರಳುಗಾರಿಕೆಗೆ ಅನುಮತಿ ನೀಡಬೇಕು ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ.
ಇದಲ್ಲದೇ, ಮರಳು ಉದ್ಯಮವನ್ನೇ ನಂಬಿಕೊಂಡ ಉದ್ದಿಮೆದಾರರು, ಕಾರ್ಮಿಕರು, ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮರಳು ಸಿಗದೇ ಇರೋದ್ರಿಂದ ಇಲ್ಲಿನ ಜನರಿಗೆ ಮನೆ ನಿರ್ಮಿಸಿಕೊಳ್ಳಲು ತೊಂದರೆಯಾಗಿದೆ. ಸರ್ಕಾರಿ ಕಾಮಗಾರಿಗಳನ್ನ ಗುತ್ತಿಗೆ ಪಡೆದ ಗುತ್ತಿಗೆದಾರರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ.
ನದಿಯಲ್ಲಿ ಅಪಾರ ಪ್ರಮಾಣದ ಮರಳು ಸಂಗ್ರಹವಾಗಿದೆ. ಭಾರಿ ಮಳೆ ಬಂದರೆ ನದಿಯಲ್ಲಿ ಪ್ರವಾಹ ಕೂಡ ಬರುತ್ತಿದೆ. ಹೀಗಾಗಿ ಮರಳುಗಾರಿಕೆಗೆ ಅವಕಾಶ ನೀಡಬೇಕೆಂದು ಮರಳು ಉದ್ಯಮದಾರರು ಸರ್ಕಾರವನ್ನ ಒತ್ತಾಯಿಸಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ಮರಳುಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಜಿಲ್ಲಾಡಳಿತ ಪರವಾನಗಿ ನೀಡಲು ಮೀನಾಮೇಷ ಎಣಿಸುತ್ತಿದೆ.
ಸರ್ಕಾರ ನೂತನವಾಗಿ ಜಾರಿ ಮಾಡಿರುವ ಮರಳು ನೀತಿಯನ್ನು ಜಿಲ್ಲೆಯಲ್ಲಿಯೂ ಅನುಷ್ಠಾನಗೊಳಿಸಿ ಕಾಮಗಾರಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಗುತ್ತಿಗೆದಾರರು ಆಗ್ರಹಿಸಿದ್ದಾರೆ.
ಜಿಲ್ಲಾಡಳಿತದಿಂದ ವಿಳಂಬ ಧೋರಣೆ:
ಈ ಹಿಂದೆ ಕಾಳಿ, ಗಂಗಾವಳಿ, ಅಘನಾಶಿನಿ ಮತ್ತು ಶರಾವತಿ ನದಿಯಲ್ಲಿ ಪರವಾನಗಿ ಪಡೆದು ಮರಳುಗಾರಿಕೆ ನಡೆಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಇದೀಗ ಕಾರವಾರದ ಕಾಳಿ ನದಿ ಪರಿಸರ ಸೂಕ್ಷ್ಮ ವಲಯ ಎಂಬ ಕಾರಣಕ್ಕೆ ಮರಳು ತೆಗೆಯಲು ಅವಕಾಶ ನೀಡುತ್ತಿಲ್ಲ. ಸ್ಥಳೀಯ ಮರಳು ಉದ್ಯಮಿಗಳು, ಗುತ್ತಿಗೆದಾರರು, ನಾಗರಿಕರು ಅವಕಾಶ ನೀಡುವಂತೆ ಜಿಲ್ಲಾಡಳಿತವನ್ನು ಕೇಳಿಕೊಳ್ಳುತ್ತಿದ್ದಾರೆ.
ಶಾಸಕಿ ರೂಪಾ ಜತೆ ಚರ್ಚೆ:
ಹಲವು ಬಾರಿ ಅನುಮತಿಗೆ ಮನವಿ ಸಲ್ಲಿಸಿದ ಬಳಿಕ ಸರ್ಕಾರ ಮರಳುಗಾರಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿದೆ ಎಂಬುದು ಉದ್ಯಮಿಗಳ ಆರೋಪವಾಗಿದೆ. ಈಗಾಗಲೇ ಸಿಆರ್ ಝಡ್ ಕ್ಲಿಯರೆನ್ಸ್ ಪಡೆದು ಸ್ಯಾಂಡ್ ಬಾರ್ ಗುರುತಿಸಲಾಗಿದೆ.
ಈ ಸಂಬಂಧ ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಅವರೊಂದಿಗೆ ಸಭೆ ನಡೆಸಿದ ಉದ್ಯಮದಾರರು ಅವಕಾಶ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ.