ಕಾರವಾರ: ಅವರು ದೇಶದ ಪ್ರತಿಷ್ಠಿತ ಐಎನ್ಎಸ್ ಕದಂಬ ನೌಕಾನೆಲೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದವರು. ಆದರೆ, ಹೊಟ್ಟೆಪಾಡಿಗಾಗಿ ಇಲ್ಲಿನ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಮೇಲೆ ಕೆಲಸಕ್ಕೆ ಸೇರಿಕೊಂಡವರಿಗೆ ಗುತ್ತಿಗೆ ಕಂಪನಿ ನಾಲ್ಕು ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿದೆ.
ಸದ್ಯ ಎಲ್ಲರೂ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ದೇಶದ ಪ್ರತಿಷ್ಠಿತ ಐಎನ್ಎಸ್ ಕದಂಬ ನೌಕಾನೆಲೆಗಾಗಿ ಕಾರವಾರ, ಅಂಕೋಲಾ ಭಾಗದ ಸಾಕಷ್ಟು ಕುಟುಂಬಗಳು ಮನೆ ಜಮೀನುಗಳನ್ನು ಕಳೆದುಕೊಂಡಿವೆ. ಸರ್ಕಾರ ಇದಕ್ಕೆ ಕೆಲವರಿಗೆ ಪರಿಹಾರ ನೀಡಿದೆಯಾದರೂ, ಇನ್ನೂ ಕೂಡಾ ಕೆಲವರ ಪರಿಸ್ಥಿತಿ ಸುಧಾರಿಸಿಲ್ಲ. ಕೆಲಸಕ್ಕಾಗಿ ಊರೂರು ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಆದರೆ ಹೀಗೆ ಮನೆ-ಜಮೀನುಗಳನ್ನು ಕಳೆದುಕೊಂಡಿದ್ದ ಕೆಲ ನಿರಾಶ್ರಿತ ಕುಟುಂಬದ ಯುವಕರು, ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದರು. ಟೆಂಡರ್ ಪಡೆದಿದ್ದ ಕೇರಳ ಮೂಲದ ಖಾಸಗಿ ಕಂಪನಿ, ಮೊದ-ಮೊದಲು ವೇತನ ನೀಡಿತ್ತಾದರೂ, ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಸಿಲ್ಲವಂತೆ. ಅಲ್ಲದೆ ಪಿಎಫ್, ಇಎಸ್ಐ ಸೇರಿದಂತೆ ಸೌಲಭ್ಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇದೀಗ ಇಲ್ಲಿ ದುಡಿಯುತ್ತಿರುವ ನಾಲ್ವರು ಮಹಿಳೆಯರು ಸೇರಿದಂತೆ 24 ಕೆಲಸಗಾರರಿಗೆ ಕಂಪನಿಯವರು ಟೆಂಡರ್ ಬಿಡುವುದಾಗಿ ತಿಳಿಸಿದ್ದು, ಕೆಲಸ ಮಾಡುವುದಾದರೆ ಮಾಡಿ, ಇಲ್ಲ ಅಂದ್ರೆ ಬಿಡಿ ಎನ್ನುತ್ತಿದ್ದಾರೆ. ಆದರೆ ಇದನ್ನೇ ನಂಬಿ ಬದುಕುತ್ತಿದ್ದ ತಮಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಕಂಪನಿ ಬಾಕಿ ಹಣ ಪಾವತಿಸಬೇಕು ಎಂದು ಹೊರಗುತ್ತಿಗೆ ಉದ್ಯೋಗಿಗಳು ಒತ್ತಾಯಿಸುತ್ತಿದ್ದಾರೆ.
ಐಎನ್ಎಸ್ ಪತಂಜಲಿ ಆಸ್ಪತ್ರೆಗೆ ಕೆಲಸ ಪೂರೈಸಲು ಗುತ್ತಿಗೆ ಪಡೆದಿದ್ದ 24 ಜನರ ಹೊರಗುತ್ತಿಗೆ ವೇತನ ನೀಡಿಲ್ಲ. ಕಾರಣ ಕೇಳಿದರೆ ಪತಂಜಲಿಯಿಂದ ವೇತನ ಪಾವತಿ ಆಗಿಲ್ಲ ಎನ್ನುತ್ತಿದ್ದಾರೆ. ಆದರೆ ಸರ್ಕಾರ ಹಣ ನೀಡಿಲ್ಲವೆಂದು ಗುತ್ತಿಗೆ ಪಡೆದ ಕಂಪನಿ ಕೆಲಸಗಾರರಿಗೆ ವೇತನ ನೀಡದೇ ಇರುವುದು ಕಾನೂನಿನ ಉಲ್ಲಂಘನೆ. ತಿಂಗಳ ಮೊದಲ ವಾರ ಕಡ್ಡಾಯವಾಗಿ ಸಂಬಳ ಪಾವತಿಸಬೇಕು ಅನ್ನೋದು ಗುತ್ತಿಗೆ ನೌಕರರು ಆಗ್ರಹಿಸಿದ್ದಾರೆ.
ಈಗಾಗಲೇ ಕಾರವಾರ ಡಿವೈಎಸ್ಪಿ ಸಂಬಂಧಪಟ್ಟ ಕಂಪನಿ ಜತೆ ಮಾತನಾಡಿ, ವೇತನ ಪಾವತಿಸಲು ಗಡುವು ನೀಡಿದ್ದಾರೆ. ಒಂದೊಮ್ಮೆ ಆಗಲೂ ಪಾವತಿಸದೇ ಇದ್ದಲ್ಲಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ದುಡಿದು ಕುಟುಂಬವನ್ನು ಸಾಕಬೇಕಿದ್ದವರು ಇದೀಗ ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಕಂಪನಿ ಕೂಡಲೇ ವೇತನ ಪಾವತಿಸಿ ಅವರಿಗೆ ಬದುಕಲು ಅವಕಾಶ ಮಾಡಿಕೊಡಬೇಕಿದೆ.