ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ 'ಸಾಗರ ಕವಚ' ಕಾರ್ಯಾಚರಣೆಯಲ್ಲಿ ಸಮುದ್ರ ಹಾಗೂ ರೈಲ್ವೆ ಮೂಲಕ ಕರಾವಳಿ ಪ್ರವೇಶಿಸಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ 20ಕ್ಕೂ ಹೆಚ್ಚು ಆತಂಕವಾದಿಗಳನ್ನು ಬಂಧಿಸಿ ಎಲ್ಲೆಡೆ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಯಾರೂ ಆತಂಕಪಡುವ ಅವಶ್ಯಕ ಇಲ್ಲ! ಪೊಲೀಸರು ಬಂಧಿಸಿದ್ದು ನಿಜವಾದ ಶಂಕಿತ ಆತಂಕವಾದಿಗಳನ್ನಲ್ಲ. ಕರಾವಳಿ ಭಾಗದಲ್ಲಿ ಭದ್ರತೆ ಹೆಚ್ಚಿಸುವ ಹಾಗೂ ಪರಿಶೀಲಿಸುವ ಸಲುವಾಗಿ ವಿವಿಧ ಭದ್ರತಾ ಪಡೆಗಳು ಜಂಟಿಯಾಗಿ ನಡೆಸುವ ‘ಸಾಗರ ಕವಚ’ ಎಂಬ ಅಣಕು ಕಾರ್ಯಾಚರಣೆ ಇದು.
ಎರಡು ದಿನಗಳ ಕಾಲ ನಡೆದ ಕಾರ್ಯಚರಣೆಯಲ್ಲಿ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ನೌಕಾನೆಲೆ, ತಟರಕ್ಷಕ ಭದ್ರತಾ ಪಡೆಗಳು ಪಾಲ್ಗೊಂಡಿದ್ದವು. ಕಾರ್ಯಾಚರಣೆ ಸಂಬಂಧ ರೈಲ್ವೆ ನಿಲ್ದಾಣ, ಬಂದರು, ಬಸ್ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಸಮುದ್ರ ಮಾರ್ಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ ನಡೆಸಲಾಯಿತು.
ರೆಡ್ಪೋರ್ಸ್ ಎಂಬ ಭದ್ರತಾ ಸಿಬ್ಬಂದಿಗಳೇ ಮಾರುವೇಷದಲ್ಲಿ ಹುಸಿಬಾಂಬ್ಗಳನ್ನು ಸಾಗಿಸುತ್ತಾರೆ. ಅವರನ್ನು ಬ್ಲೂ ಫೋರ್ಸ್ ತಂಡ ಪತ್ತೆ ಹಚ್ಚಬೇಕು. ಅದರಂತೆ ಕುಮಟಾದ ಗೋಕರ್ಣ ಕಡಲತೀರದಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು, ರೈಲ್ವೆ ನಿಲ್ದಾಣ, ದೇವಭಾಗ ಬಳಿ ಬೋಟ್ ಮೂಲಕ ತೆರಳುತ್ತಿದ್ದವರೂ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸಿದರೆ, ಕರಾವಳಿ ಕಾವಲು ಪಡೆ ದೋಣಿ ಹಾಗೂ ಬೋಟ್ಗಳ ಮೇಲೆ ನಿಗಾ ಇಟ್ಟಿದ್ದರು.
ಇದೊಂದು ಭದ್ರತೆ ಪರಿಶೀಲನಾ ಕಾರ್ಯಾಚರಣೆಯಾಗಿದ್ದು, ಮುಂದೆ ಸಂಭವಿಸಬಹುದಾದ ಭಯೋತ್ಪಾದಕ ಚಟುವಟಿಕೆಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು.ಈ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.