ಕಾರವಾರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ರಾಜ್ಯ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯನ್ನು ಜಿಲ್ಲೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ವಿಸ್ತರಿಸಲು ಹೊಸದಾಗಿ 100 ಬಸ್‌ಗಳ ಬೇಡಿಕೆಯನ್ನು ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ತಮ್ಮ ಕೇಂದ್ರ ಕಚೇರಿಗೆ ಸಲ್ಲಿಸಿದ್ದಾರೆ.
ಹೌದು, ಜಿಲ್ಲೆಯಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಸೆಪ್ಟಂಬರ್ 10ರ ವರೆಗೆ 1,54,34,333 ಮಂದಿ ಮಹಿಳೆಯರು ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಸಂಚರಿಸಿದ್ದು, 42,16,28,153 ರೂ. ಮೊತ್ತದ ಟಿಕೆಟ್ ವಿತರಿಸಲಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 516 ಬಸ್‌ಗಳ ಮೂಲಕ ದೈನಂದಿನ ಸಾರಿಗೆ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದು, ಪ್ರಸ್ತುತ ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಇದನ್ನು ಸರಿದೂಗಿಸಲು ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ 100 ಬಸ್‌ಗಳ ಅವಶ್ಯಕತೆಯಿದ್ದು, ಈ ಬಗ್ಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಬೆಂಗಳೂರಿನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಮೂಲಕ ಹೊಸ ಬಸ್ಗಳನ್ನು ಖರೀದಿ ಮಾಡಿದಾಗ ಜಿಲ್ಲೆಗೆ ಆದ್ಯತೆಯಲ್ಲಿ ಬಸ್ಗಳನ್ನು ನೀಡುವಂತೆ ಅಧಿಕಾರಿಗಳು ಕೋರಿದ್ದಾರೆ.
ಜಿಲ್ಲೆಯಲ್ಲಿ ಶಕ್ತಿ ಯೋಜನೆಯ ಪ್ರಯೋಜನ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ದೊರಕಿಸುವ ಉದ್ದೇಶದಿಂದ, ಜಿಲ್ಲೆಯಿಂದ ಹೊರಗೆ ದೂರದ ಟ್ರಿಪ್ಗಳಿಗೆ ಸಂಚರಿಸುತ್ತಿದ್ದ ಬಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸಿ ಜಿಲ್ಲೆಯೊಳಗೆ ಅದರಲ್ಲೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಬಸ್‌ಗಳ ಸಂಚಾರವನ್ನು ಹೆಚ್ಚಿಸಲಾಗಿದೆ. ಯೋಜನೆಯ ಮೂಲಕ ಸಾರಿಗೆ ನಿಗಮಕ್ಕೆ ಸಹ ಆದಾಯ ವೃದ್ಧಿಯಾಗಿದ್ದು, ಶೇ. 30ಕ್ಕೂ ಅಧಿಕ ಪ್ರಗತಿ ಹೊಂದಿದೆ. ಮಾಸಿಕ ಆದಾಯ 50 ಲಕ್ಷದಿಂದ 70 ಲಕ್ಷ ರೂ. ಗಳಿಗೂ ಅಧಿಕ ಏರಿಕೆ ಕಂಡಿದೆ.
ಇನ್ನು, ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಬಸ್‌ಗಳ ಸಂಚಾರದಲ್ಲಿ ಕೊರತೆ ಆಗುತ್ತಿರುವ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಶಾಲಾ ಅವಧಿಯಲ್ಲಿ ಬಸ್ಗಳಲ್ಲಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಕುರಿತು ಗಮನಕ್ಕೆ ಬಂದಿದೆ. ಯಾವುದೇ ಸಂದರ್ಭದಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಬೇಡಿಕೆಗನುಗುಣವಾಗಿ ಜಿಲ್ಲೆಗೆ ಹೊಸ ಬಸ್ಗಳನ್ನು ಪಡೆಯುವಂತೆ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶಕ್ತಿ ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿದಿನ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಸಂಚರಿಸುತ್ತಿರುವ ಮಹಿಳೆಯರ ಸಂಖ್ಯೆ ಅಧಿಕಗೊಂಡಿದ್ದು, ನಿಗಮದ ಮೂಲಕ ಉತ್ತಮ ಸೇವೆ ಒದಗಿಸಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದಾಗಿ ಹೆಚ್ಚುವರಿಯಾಗಿ 100 ಹೊಸ ಬಸ್‌ಗಳ ಬೇಡಿಕೆಯನ್ನು ಕೇಂದ್ರ ಕಚೇರಿಗೆ ನೀಡಲಾಗಿದ್ದು, ಕೊರತೆಯಿರುವ ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿ ನೇಮಕಕ್ಕೆ ಕೂಡಾ ಬೇಡಿಕೆ ಸಲ್ಲಿಸಲಾಗಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಶಿರಸಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.