ಕಾರವಾರ : ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದರೂ ನಿದ್ರೆಗೆ ಜಾರಿದ್ದ ಜಿಲ್ಲಾಡಳಿತ, ಇದೀಗ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.
ಜಿಲ್ಲೆಯಲ್ಲಿ ಪ್ರತಿನಿತ್ಯ ಸಾವಿರದಷ್ಟು ಕೋವಿಡ್ ಪ್ರಕರಣಗಳು ವರದಿಯಾಗುತ್ತಿದೆ. ಗ್ರಾಮೀಣ ಭಾಗದಲ್ಲೂ ಹೆಚ್ಚು ಸೋಂಕಿತತು ಕಂಡು ಬರುತ್ತಿದ್ದಾರೆ. ಹಾಗಾಗಿ, ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದರೂ ಜಿಲ್ಲಾಡಳಿತ ಮಾತ್ರ ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ, ಕೋಟೆ ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದಂತೆ, ಸೋಂಕು ಹರಡಿದ ಬಳಿಕ ಕ್ರಮಕ್ಕೆ ಮುಂದಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸೂಚನೆಯಂತೆ ಅತಿಹೆಚ್ಚು ಸೋಂಕಿತರು ಕಂಡು ಬರುತ್ತಿರುವ ಕಾರವಾರ, ದಾಂಡೇಲಿ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲೂಕುಗಳನ್ನು ವಿಶೇಷ ಕಂಟೇನ್ಮೆಂಟ್ ವಲಯಗಳೆಂದು ಗುರುತಿಸಿ ಮೇ. 24 ರವರೆಗೆ ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಜೊತೆಗೆ ಜಿಲ್ಲೆಯ 57 ಗ್ರಾಮ ಪಂಚಾಯತ್ಗಳು, ಕೆಲ ನಗರ ಹಾಗೂ ಪಟ್ಟಣಗಳನ್ನು ಕಂಟೇನ್ಮೆಂಟ್ ವಲಯಗಳೆಂದು ಗುರುತಿಸಿ ಯಾರು ಓಡಾಡದಂತೆ ಪ್ರಮುಖ ರಸ್ತೆಗಳಿಗೆ ಬೇಲಿ ಹಾಕಲಾಗುತ್ತಿದೆ.
ಓದಿ : ಹಳ್ಳಿಗಳಲ್ಲೇ ಕೋವಿಡ್ ಸಾವಿನ ಪ್ರಮಾಣ ಹೆಚ್ಚಳ, ಸ್ವಯಂ ಚಿಕಿತ್ಸೆ ಬೇಡ.. ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ
ಕಾರವಾರದ ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ 13 ವಾರ್ಡ್ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ಪೂರೈಸಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಜಿಲ್ಲಾಧಿಕಾರಿಗಳ ಜೊತೆಗಿನ ವಿಡಿಯೋ ಸಂವಾದದಲ್ಲಿ ಜಿಲ್ಲೆಯಲ್ಲಿ ಹೆಚ್ಚು ಸೋಂಕಿತರು ಇರುವ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಂಟೇನ್ಮೆಂಟ್ ಝೋನ್ಗಳೆಂದು ಗುರುತಿಸಿ ಮತ್ತು ಪರೀಕ್ಷೆ ಹೆಚ್ಚಿಸಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ ಸೂಚಿಸಿದ್ದರು. ಇದೀಗ ಈ ಎಲ್ಲ ಕ್ರಮಗಳು ಒಂದೊಂದಾಗಿ ಜಾರಿಯಾಗುತ್ತಿದ್ದು, ಕಳೆದ ಎರಡು ದಿನದಿಂದ ಸೋಂಕಿತರ ಪ್ರಮಾಣ ಕೊಂಚ ಕಡಿಮೆಯಾಗಿದೆ.
ಹಳ್ಳಿಗಳಲ್ಲಿ ಕೊರೊನಾ ಲಕ್ಷಣಗಳಿದ್ದರೂ, ಅದೆಷ್ಟೊ ಮಂದಿ ಪರೀಕ್ಷೆ ಮಾಡಿಸಿಕೊಳ್ಳದೆ ಸಿಕ್ಕ ಸಿಕ್ಕ ಮಾತ್ರೆಗಳನ್ನು ನುಂಗಿಕೊಂಡು ಕದ್ದು ಮುಚ್ಚಿ ಒಡಾಡುತ್ತಿದ್ದಾರೆ. ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಮೊದಲು ಇಂತಹ ಪ್ರದೇಶಗಳನ್ನು ಪತ್ತೆ ಮಾಡಿ ಸೋಂಕಿತರ ಸಂಪರ್ಕಕ್ಕೆ ಬಂದವರ ಓಡಾಟ ನಿಲ್ಲಿಸಬೇಕಿದೆ. ನಗರ ಪ್ರದೇಶಗಳಲ್ಲಿಯೂ ಜನರು ಅನಗತ್ಯ ಓಡಾಟ ನಡೆಸುತ್ತಿದ್ದಾರೆ. ಇದೀಗ ಪೊಲೀಸರು ಹಾಗೂ ಅಧಿಕಾರಿಗಳ ಸೂಚನೆಯಂತೆ ಹೆಚ್ಚಿನ ಸೋಂಕಿತರಿರುವ ಪ್ರದೇಶಗಳಲ್ಲಿ ಬೇಲಿ ಹಾಕಲಾಗುತ್ತಿದ್ದು, ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ. ಇದೊಂದು ಉತ್ತಮ ಬೆಳವಣಿಗೆ. ಇನ್ನಾದರೂ ಜನ ಎಚ್ಚೆತ್ತುಕೊಂಡಲ್ಲಿ ಕೊರೊನಾ ತಡೆಯಲು ಸಾಧ್ಯವಿದೆ ಎನ್ನುತ್ತಾರೆ ನಗರಸಭೆ ಸದಸ್ಯ ಪ್ರೇಮಾನಂದ ಗುನಗಿ.