ಶಿರಸಿ : ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಶಿರಸಿ ಪೊಲೀಸರಿಂದ ವಿನೂತನ ಜಾಗೃತಿ ಅಭಿಯಾನ ನಡೆಯಿತು.
ಸ್ಥಳೀಯ ಕಲಾವಿದರು ಯಮನ ವೇಷ ಧರಿಸಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು. ಗಂಡು ಕಲೆ ಯಕ್ಷಗಾನದ ವೇಷ ತೊಟ್ಟ ಯಮ ಹಾಗೂ ಯಮಕಿಂಕರರು ಹೆಲ್ಮೆಟ್ ಇಲ್ಲದ ವಾಹನ ಸವಾರರನ್ನು ತಡೆದು ಯಮಶಾಪ ಹಾಕುವಂತೆ ಅಣಕು ಜಾಗೃತಿ ನಡೆಸಿದರು. ಶಿರಸಿಯ ಬಿಡ್ಕಿಬೈಲ್ ಸೇರಿದಂತೆ ನಗರದ ಹಲವು ಪ್ರಮುಖ ವೃತ್ತಗಳಲ್ಲಿ ಈ ಜಾಗೃತಿ ಕಾರ್ಯ ನಡೆಯಿತು.
ಸ್ಥಳೀಯ ಕಲಾವಿದ ಮಂಜುನಾಥ ಶೇಟ್ ಯಮನ ಪಾತ್ರ ನಿರ್ವಹಿಸಿದ್ದರು. ಇಂದು ರಸ್ತೆ ಸುರಕ್ಷಾ ಮಾಸಾಚರಣೆಯಾದ್ದರಿಂದ ವಾಹನ ಸವಾರರಿಗೆ ಯಾವುದೇ ರೀತಿಯ ದಂಡ ವಿಧಿಸಿರಲಿಲ್ಲ. ಈ ಹಿಂದೆ ಕೊರೊನಾ ಜಾಗೃತಿಯಲ್ಲೂ ಹೆಚ್ಚಿನ ಮುತುವರ್ಜಿವಹಿಸಿ ಹಲವು ವಿನೂತನ ಜಾಗೃತಿ ಕಾರ್ಯಕ್ರಮಗಳ ಮೂಲಕ ಶಿರಸಿ ಪೊಲೀಸರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು.