ಕಾರವಾರ: ಕಳೆದ ಜುಲೈ ತಿಂಗಳಿನಲ್ಲಿ ಉಂಟಾದ ಮಹಾ ಪ್ರವಾಹದಿಂದ ಜಿಲ್ಲೆಗೆ ದೊಡ್ಡ ಮಟ್ಟದಲ್ಲೇ ಹಾನಿ ಆಗಿತ್ತು. ಅದರಲ್ಲೂ ಜಿಲ್ಲೆಯ ಹಲವೆಡೆ ಗುಡ್ಡ ಕುಸಿದು ಸಾಕಷ್ಟು ಪ್ರಮಾಣದಲ್ಲಿ ಅವಘಡವಾಗಿತ್ತು.
ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಇಡೀ ಗ್ರಾಮವೇ ಸಂಪರ್ಕ ಕಡಿದುಕೊಂಡಿತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗಳ ಪ್ರಯತ್ನದಿಂದ ಗ್ರಾಮಕ್ಕೆ ಕೊನೆಗೂ ಸಂಪರ್ಕ ಕಲ್ಪಿಸಲು ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿದೆ.
ಕಳೆದ ಜುಲೈ 23 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎದುರಾದ ನೆರೆಯಿಂದ ಇಡೀ ಜಿಲ್ಲೆಯೇ ನಲುಗಿ ಹೋಗಿತ್ತು. ಜಿಲ್ಲೆಯ ಹಲವು ನದಿಗಳು ಉಕ್ಕಿ ಹರಿದ ಪರಿಣಾಮ ನೂರಾರು ಗ್ರಾಮಗಳು ಮುಳುಗಡೆಯಾಗಿದ್ದರೆ, ಇನ್ನೊಂದೆಡೆ ಧಾರಾಕಾರ ಮಳೆಗೆ ಗುಡ್ಡ ಕುಸಿದು ಹಲವೆಡೆ ಅಪಾರ ಹಾನಿಯಾಗಿತ್ತು. ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಇಡೀ ಗ್ರಾಮವೇ ಸಂಪರ್ಕಕ್ಕೆ ಸಿಗದಂತಾಗಿತ್ತು. ಸುಮಾರು 200 ಕುಟುಂಬಗಳಿರುವ ಗ್ರಾಮದ ಮೇಲೆಯೇ ಗುಡ್ಡ ಕುಸಿದಿತ್ತು.
ಇದಲ್ಲದೇ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆಯೇ ಗುಡ್ಡ ಕುಸಿತದಿಂದ ಕೊಚ್ಚಿ ಹೋಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸ್ವಕ್ಷೇತ್ರ ಸಹ ಇದಾಗಿದ್ದರಿಂದ, ಗ್ರಾಮಕ್ಕೆ ಮತ್ತೆ ಸಂಪರ್ಕ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಕೆಲಸವನ್ನ ಸ್ವಂತ ಖರ್ಚಿನಲ್ಲಿ ಮಾಡಿ ಜೆಸಿಬಿಗಳ ಮೂಲಕ ಕೆಲಸ ಪ್ರಾರಂಭಿಸಿದ್ದರು. ಇನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಸಂಪರ್ಕ ಕಲ್ಪಿಸಲು ನಿರಂತರ ಪ್ರಯತ್ನ ಮಾಡಿದ ನಂತರ ಕೊನೆಗೂ ಗ್ರಾಮಕ್ಕೆ ರಸ್ತೆ ಸಂಪರ್ಕ ಮಾಡಲಾಗಿದೆ. ಇದೀಗ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಗ್ರಾಮಕ್ಕೆ ಭೇಟಿ ನೀಡಿ ರಸ್ತೆಯನ್ನು ಗಮನಿಸಿದರು.
ಕೋಟ್ಯಂತರ ರೂಪಾಯಿ ಹಾನಿಯಾಗಿದ್ದು, ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೇಳಿದ್ದರು. ಅಷ್ಟೇ ಅಲ್ಲದೆ, ಗ್ರಾಮವನ್ನೇ ಸ್ಥಳಾಂತರ ಮಾಡಲು ಸೂಚಿಸಿದ್ದರು. ಸದ್ಯ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲಾಗಿತ್ತು, ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಗ್ರಾಮಕ್ಕೆ ಸಚಿವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಜನರ ಸಮಸ್ಯೆಗಳ ಬಗ್ಗೆ ಆಲಿಸಿ, ಬಳಿಕ ಅವರ ಅಹವಾಲುಗಳನ್ನು ಸ್ವೀಕರಿಸಿದರು.