ಶಿರಸಿ: ರಾತ್ರಿಯ ಸಂದರ್ಭದಲ್ಲಿ ಬಿಡಾಡಿ ದನಗಳಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಶಿರಸಿ ಉಪವಿಭಾಗದ ಪೊಲೀಸ್ ಇಲಾಖೆ ಮಾದರಿ ಕ್ರಮವನ್ನು ಕೈಗೊಂಡಿದೆ. ಗೋ ರಕ್ಷಕರೊಂದಿಗೆ ಸೇರಿಕೊಂಡು ಜಾನುವಾರುಗಳ ಕೊಂಬುಗಳಿಗೆ ರೇಡಿಯಂ ಪೇಪರ್ ಕಟ್ಟುವ ಮೂಲಕ ಅವುಗಳ ಜೀವ ಮತ್ತು ವಾಹನ ಸವಾರರ ಜೀವ ಉಳಿಸುವ ಕೆಲಸ ಮಾಡಲಾಗುತ್ತಿದೆ.
ರಾತ್ರಿ ಹೊತ್ತು ಬಿಡಾಡಿ ಹಸುಗಳು ರಸ್ತೆಯ ಮೇಲೆ ಮಲಗುತ್ತವೆ. ವಾಹನ ಸವಾರರು ವಾಹನ ಚಲಾಯಿಸುವಾಗ ಕೆಲವು ಸಲ ಹಸುಗಳು ಕಪ್ಪಿನಲ್ಲಿ ಕಾಣದೆ ಹಲವಾರು ಅಪಘಾತಗಳು ಸಂಭವಿಸಿವೆ. ಅದ್ರಲ್ಲೂ ಕಪ್ಪು ಹಸುಗಳಂತೂ ಕಾಣದೇ ಸವಾರರು ಹಸುಗಳಿಗೆ ಡಿಕ್ಕಿ ಹೊಡೆದ ಹಲವಾರು ನಿದರ್ಶನಗಳಿವೆ. ಇದಕ್ಕೋಸ್ಕರ ದೂರದಿಂದ ಹೇಗಾದ್ರೂ ಹಸುಗಳು ಗೋಚರವಾಗುವಂತೆ ಮಾಡ್ಬೇಕು ಅಂತ ಪೊಲೀಸರು ನೂತನ ಐಡಿಯಾಕ್ಕೆ ಮೊರೆ ಹೋಗಿದ್ದು, ವಾಹನ ಸವಾರರ ಮತ್ತು ಬಿಡಾಡಿ ದನಗಳ ಜೀವ ಉಳಿಸುವ ಪ್ಲಾನ್ ಮಾಡಿದ್ದಾರೆ.
ರಸ್ತೆಯಲ್ಲಿ ಸಂಚರಿಸೋ ಬಿಡಾಡಿ ಹಸುಗಳು ರಾತ್ರಿ ವೇಳೆ ರಸ್ತೆಗಳಲ್ಲಿ ಹಾಗೂ ರಸ್ತೆ ಪಕ್ಕದ ಜಾಗಗಳಲ್ಲಿ ಮಲಗಿರುತ್ತವೆ. ಆಗ ಅವುಗಳ ಕೊಂಬುಗಳಿಗೆ ರಿಫ್ಲೆಕ್ಟರ್ಗಳನ್ನು ಅಳವಡಿಸೋ ಕಾರ್ಯವನ್ನ ಪೊಲೀಸ್ ಇಲಾಖೆ ಹಾಗೂ ಗೋರಕ್ಷಕರು ಮಾಡುತ್ತಿದ್ದಾರೆ. ರಿಫ್ಲೆಕ್ಟರ್ ಪೇಪರ್ಗಳನ್ನು ಹಸುಗಳ ಕೊಂಬುಗಳಿಗೆ ಅಂಟಿಸುತ್ತಿದ್ದಾರೆ. ರಾತ್ರಿ ವೇಳೆ ಅವು ಮಲಗಿದ್ದಾಗ ರಿಫ್ಲೆಕ್ಟರ್ ಅಳವಡಿಸೋದು ಸುಲಭವಾಗಿರೋದ್ರಿಂದ ರಾತ್ರಿ ವೇಳೆ ಈ ಕಾರ್ಯಾಚರಣೆ ನಡೆಯುತ್ತಿದೆ.
ಕಳೆದ ಎರಡು ದಿನಗಳಿಂದ ಶಿರಸಿಯಲ್ಲಿ ಸುಮಾರು 80 ರಿಂದ 100 ಹಸುಗಳ ಕೊಂಬುಗಳಿಗೆ ರಿಫ್ಲೆಕ್ಟರ್ ಅಳವಡಿಸೋ ಕಾರ್ಯ ನಡೆಯುತ್ತಿದೆ. ಇದರಿಂದ ವಾಹನ ಸವಾರರಿಗೆ ಅನುಕೂಲವಾಗಿದ್ದು, ಪೊಲೀಸ್ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಒಟ್ಟಿನಲ್ಲಿ ಅಪಘಾತಗಳನ್ನು ಹಾಗೂ ಹಸುಗಳನ್ನ ರಕ್ಷಿಸೋಕೆ ಇಲಾಖೆ ಈ ಹೊಸ ಪ್ಲಾನ್ ಮಾಡಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಇದೇ ರೀತಿ ಜಿಲ್ಲೆಯ ವಿವಿಧ ಕಡೆಗಳಲ್ಲಿಯೂ ರಿಪ್ಲೆಕ್ಟರ್ ಆಳವಡಿಕೆ ಕಾರ್ಯ ನಡೆದಿದ್ದು, ಅಪಘಾತಗಳ ಸಂಖ್ಯೆ ಕ್ಷೀಣ ಆಗಲಿದೆ ಎಂದು ಪೊಲೀಸ್ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.