ಶಿರಸಿ : ಉ.ಕ ಜಿಲ್ಲೆಯ ಸ್ಟಾರ್ ಕ್ಷೇತ್ರವಾದ ಯಲ್ಲಾಪುರ ವಿಧಾನಸಭಾ ವ್ಯಾಪ್ತಿಯ ಬನವಾಸಿ ಭಾಗದಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಅನರ್ಹ ಶಾಸಕ ಶಿವರಾಮ ಹೆಬ್ಬಾರ್ರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿದ ಬಳಿಕ ಇಲ್ಲಿನ ಬನವಾಸಿ ಬ್ಲಾಕ್ನ ಎಲ್ಲಾ 10 ಗ್ರಾಮ ಪಂಚಾಯತ್ನ ಘಟಕಾಧ್ಯಕ್ಷರು ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವವನ್ನು ತೊರೆಯುತ್ತಿದ್ದಾರೆ.
ಬನವಾಸಿ ಭಾಗದ ಗುಡ್ನಾಪುರ, ಉಂಚಳ್ಳಿ, ಬಂಕನಾಳ, ಅಂಡಗಿ, ಕೊರ್ಲಕಟ್ಟಾ, ಭಾಶಿ, ಬನವಾಸಿ, ಬಿಸ್ಲಕೊಪ್ಪ ಸೇರಿದಂತೆ ಗ್ರಾಮ ಪಂಚಾಯತ್ಗಳ ಎಲ್ಲಾ ಘಟಕಾಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಇವರೊಂದಿಗೆ ಕಾಂಗ್ರೆಸ್ ಬೆಂಬಲದಿಂದ ಗೆದ್ದು ಬಂದ ಸದಸ್ಯರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಾಜಿ ಶಾಸಕ ಶಿವರಾಮ ಹೆಬ್ಬಾರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಅವರ ಬೆಂಬಲಿಗರು ತಾವು ಹೆಬ್ಬಾರರಿಗೆ ನಿಷ್ಠರಿರುವುದಾಗಿ ತೋರಿಸಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಬಳಿಕ ಅವರ ಬೆಂಬಲಿತ ಬ್ಲಾಕ್ ಅಧ್ಯಕ್ಷರುಗಳನ್ನು ಉಚ್ಛಾಟಿಸಲಾಗಿತ್ತು. ಅದರ ಜೊತೆಗೆ ಬನವಾಸಿ ಬ್ಲಾಕ್ ಅಧ್ಯಕ್ಷರು ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದರು. ಈಗ ಆ ಭಾಗದ ಘಟಕಾಧ್ಯಕ್ಷರು, 50ಕ್ಕೂ ಅಧಿಕ ಜನಪ್ರತಿನಿಧಿಗಳು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಭಾರೀ ಆಘಾತ ಉಂಟಾಗಿದೆ.
ಬನವಾಸಿ ಭಾಗದಲ್ಲಿ ಕಾಂಗ್ರೆಸ್ ಹಿಡಿತ ಕಳೆದುಕೊಳ್ಳುತ್ತಿದ್ದು, ಅದನ್ನು ಸರಿದೂಗಿಸಲು ನೂತನ ಬ್ಲಾಕ್ ಅಧ್ಯಕ್ಷರ ನೇಮಕ ಮಾಡಲಾಗಿದೆ. ಪಕ್ಷ ಸಂಘಟನೆ ಮಾಡಲು ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸಿ.ಎಫ್.ನಾಯ್ಕ ಅವರನ್ನು ನೇಮಕ ಮಾಡಿಲಾಗಿದ್ದು, ಅವರನ್ನು ನೇಮಿಸಿದ ನಂತರವೂ ವಿವಿಧ ಘಟಕಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ಬನವಾಸಿ ಭಾಗದಲ್ಲಿ ಹೊಸದಾಗಿ ಎಲ್ಲಾ ಘಟಕಗಳ ಪುನರ್ ರಚನೆ ಆಗಬೇಕಿದ್ದು, ಪಕ್ಷವನ್ನೂ ಬುಡದಿಂದ ಸಂಘಟನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.