ಶಿರಸಿ : ಜನವಸತಿ ಪ್ರದೇಶದಲ್ಲಿ ಸ್ಥಳಾಂತರಗೊಂಡಿರುವ ಬಾರ್ಗೆ ಅಬಕಾರಿ ಇಲಾಖೆ ಪರವಾನಿಗೆಯನ್ನು ನವೀಕರಿಸದಂತೆ ಒತ್ತಾಯಿಸಿ ನಗರದ ಖಾಜಿಗಲ್ಲಿಯ ನಿವಾಸಿಗಳು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಖಾಜಿಗಲ್ಲಿಗೆ ಜನನಿಬಿಡ ಪ್ರದೇಶವಾಗಿದ್ದು, ಇಲ್ಲಿಗೆ ನೂತನವಾಗಿ ಬಾರ್‌ನ ಸ್ಥಳಾಂತರ ಮಾಡಲಾಗಿದೆ. ಈ ರೆಸ್ಟೋರೆಂಟ್ಗೆ ಪರವಾನಿಗೆಯನ್ನು ನವೀಕರಿಸದಂತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. ಈ ಕುರಿತಂತೆ ಮೊದಲೇ ನಿವಾಸಿಗಳು ಜಿಲ್ಲಾಧಿಕಾರಿಗೆ ಆಕ್ಷೇಪಣೆ ಪತ್ರ ಸಲ್ಲಿಸಿದ್ದರು. ಆದರೂ ನಿಯಮ ಬಾಹಿರವಾಗಿ ಅಧಿಕಾರಿಗಳು ಮದ್ಯ ಮಾರಾಟಕ್ಕೆ ಪರವಾನಗಿ ನೀಡಿದ್ದಾರೆ. ಈಗಾಗಲೇ ರೆಸ್ಟೋರೆಂಟ್ ಸಹಿತ ಮದ್ಯದಂಗಡಿ ನಿರ್ಮಾಣಗೊಂಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಇಲ್ಲಿ ಮುಸ್ಲಿಂ ಸಮುದಾಯದ ಜನರು ಬಹಳಷ್ಟು ಸಂಖ್ಯೆಯಲ್ಲಿ ವಾಸವಿದ್ದು, ಇದರ ಸಮೀಪವೆ ಸುಲ್ತಾನಿಯಾ ಮಸೀದಿ, ನೂರುದ್ದೀನ್ ಶಾ ದರ್ಗಾ, ಮೂಲ ಹರಂ ಹಾಲ್ಸೇರಿ ಧಾರ್ಮಿಕ ಸ್ಥಳಗಳಿದೆ. ಇದಲ್ಲದೆ ಪ್ರಸಿದ್ಧ ಮಾರಿಕಾಂಬಾ ದೇವಾಲಯದ ಪಲ್ಲಕ್ಕಿ ಇದೇ ಮಾರ್ಗದಲ್ಲಿ ಸಾಗುತ್ತದೆ. ಇಂತಹ ಜಾಗದಲ್ಲಿ ಜನ ವಿರೋಧದ ನಡುವೆಯೂ ಮದ್ಯದಂಗಡಿ ನಡೆಸುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮದ್ಯದಂಗಡಿಯಿಂದ 40 ಮೀಟರ್ ವ್ಯಾಪ್ತಿಯೊಳಗೆ ಅಂಗನವಾಡಿ ಕೇಂದ್ರ, ಶಾಲೆ ಕೂಡ ಇದೆ. ಆದರೂ ಕಾನೂನನ್ನು ಗಾಳಿಗೆ ತೂರಿ, ಸುಳ್ಳು ಮಾಹಿತಿ ನೀಡಿ ಮದ್ಯದಂಗಡಿ ನಡೆಸಲು ಇಲ್ಲಿ ಅವಕಾಶ ನೀಡಲಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ ಪರವಾನಿಗೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.