ಶಿರಸಿ : ಇತ್ತೀಚಿಗೆ ಸುಪ್ರೀಂ ಕೋರ್ಟ್ ನೀಡಿರುವ ಉದ್ಯೋಗ ಬಡ್ತಿಯಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ತೀರ್ಪಿಗೆ ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ಪುನರ್ ಪರಿಶೀಲನಾ ಮೇಲ್ಮನವಿ ಸಲ್ಲಿಸುವಂತೆ ನಿರ್ದೇಶನ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಸುಪ್ರೀಂ ತೀರ್ಪಿನಿಂದ ಎಸ್ ಸಿ, ಎಸ್ ಟಿ ಸಮದಾಯಗಳಿಗೆ ಅನ್ಯಾಯವಾಗುತ್ತಿದೆ. ಆ ಕಾರಣಕ್ಕಾಗಿ ತುರ್ತಾಗಿ ಕೇಂದ್ರ ಸರ್ಕಾರ ತೀರ್ಪನ್ನು ಮರು ಪರಿಶೀಲಿಸುವಂತೆ ಮನವಿ ಸಲ್ಲಿಸಬೇಕಾಗಿದ್ದು, ಇದಕ್ಕೆ ರಾಷ್ಟ್ರಪತಿಗಳು ಸೂಚನೆ ನೀಡಬೇಕು ಎಂದು ಶಿರಸಿ ಕಾಂಗ್ರೆಸ್ ವತಿಯಿಂದ ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಬಸವರಾಜ ದೊಡ್ಮನಿ, ಸುಪ್ರೀಂ ಕೋರ್ಟ್ ಆಗಲಿ ಅಥವಾ ಬೇರೆ ರೀತಿಯಿಂದ ಸಂವಿಧಾನದ ಆಶಯಗಳನ್ನು ಬದಲು ಮಾಡಲು ಸಾಧ್ಯವಿಲ್ಲ ಎನ್ನುವುದು ತಿಳಿದ ಸಂಗತಿಯಾಗಿದೆ. ಅಗತ್ಯವಿರುವ ಮೂಲಭೂತ ಹಕ್ಕಾಗಿ ಉದ್ಯೋಗ ಪಡೆಯಬಹುದು ಎಂದು ಸಂವಿಧಾನ ಹೇಳಿರುವಾಗ ಕೋರ್ಟ್ ತೀರ್ಪಿನ ಕುರಿತು ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಆದ ಕಾರಣ ತೀರ್ಪನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸುವಂತೆ ಕೇಳಿಕೊಂಡು, ಸರ್ಕಾರ ಮನವರಿಕೆ ಮಾಡುವ ಕೆಲಸ ಮಾಡಬೇಕು ಎಂದರು.