ಭಟ್ಕಳ: ಮಣ್ಕುಳಿ ಹಾಗೂ ಮೂಡಭಟ್ಕಳದಲ್ಲಿ ಹೆದ್ದಾರಿ ಕಾಮಗಾರಿ ಪುನಾರಂಭಗೊಂಡಿದ್ದು, ಕಾಮಗಾರಿ ಸ್ಥಗಿತಗೊಳಿಸುವ ಆದೇಶ ನೀಡಬೇಕೆಂದು ಆಗ್ರಹಿಸಿ ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಇತ್ತೀಚೆಗಷ್ಟೇ ಹೆದ್ದಾರಿ ಕಾಮಗಾರಿಯಿಂದ ಮಣ್ಕುಳಿ, ಮೂಢಭಟ್ಕಳ ಗ್ರಾಮಕ್ಕೆ ಆಗುತ್ತಿರುವ ತೊಂದರೆಗಳ ಕುರಿತು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಗ್ರಾಮದ ಸಮಸ್ಯೆಗಳ ಪರಿಹಾರ ಕ್ರಮ ಕುರಿತು ಸಹಾಯಕ ಆಯುಕ್ತರ ಬಳಿ ಪ್ರಶ್ನಿಸಿದ್ದರು. ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳ ಮಟ್ಟದ ಮಾತುಕತೆಗೆ ಅವಕಾಶ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಆದರೆ ಎಲ್ಲಾ ಸಮಸ್ಯೆಗಳು ಹಾಗೇ ಇದ್ದಾಗಲೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮಣ್ಕುಳಿ, ಮೂಢಭಟ್ಕಳ ಗ್ರಾಮದಲ್ಲಿ ಗುತ್ತಿಗೆದಾರರು ಪುನಾರಂಭಿಸಿರುವುದು ಇದೀಗ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಈ ಹಿಂದೆ ಗ್ರಾಮಸ್ಥರ ಸಮಸ್ಯೆಗಳನ್ನು ಮನಗಂಡು ಪರಿಹಾರಕ್ಕೆ ಕ್ರಮ ಕೈಗೊಳ್ಳುವವರೆಗೆ ಕಾಮಗಾರಿಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದು, ಅದರಂತೆ ಕಾಮಗಾರಿಯನ್ನು ತಡೆ ಹಿಡಿದಿದ್ದರು. ಆದರೆ ಇದೀಗ ಸಮಸ್ಯೆಗಳನ್ನು ಕಡೆಗಣಿಸಿ ಕಾಮಗಾರಿಯನ್ನು ಪುನಾರಂಭಿಸುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿರುತ್ತದೆ. ಮಣ್ಕುಳಿ ಮೂಢಭಟ್ಕಳ ಗ್ರಾಮದ ಹೆದ್ದಾರಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.
ಒಂದು ವೇಳೆ ಗುತ್ತಿಗೆದಾರರು ಬಲವಂತವಾಗಿ ಕಾಮಗಾರಿ ಮುಂದುವರಿಸುವ ಪ್ರಯತ್ನ ನಡೆಸಿದರೆ ಸಾರ್ವಜನಿಕರು ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ. ಸಾರ್ವಜನಿಕರ ಸಮಸ್ಯೆ ಕುರಿತು ಮಾಹಿತಿಯುಳ್ಳ ಸಹಾಯಕ ಆಯುಕ್ತರು ತಕ್ಷಣಕ್ಕೆ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯನ್ನು ಸ್ಥಗಿತಗೊಳಿಸಲು ಆದೇಶಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಣ್ಕುಳಿ ಮತ್ತು ಮಾರುತಿನಗರ ಅಬಿವೃದ್ಧಿ ಸಮಿತಿ ಅಧ್ಯಕ್ಷ ಸತೀಶಕುಮಾರ ನಾಯ್ಕ, ಗೌರವಾಧ್ಯಕ್ಷ ಗಣಪತಿ ಪ್ರಭು, ಪ್ರ.ಕಾರ್ಯದರ್ಶಿ ನಾಗರಾಜ ಎಂ.ನಾಯ್ಕ, ಖಜಾಂಚಿ ಅಶೋಕ ಹೆಗಡೆ, ಶ್ರೀನಿವಾಸ ಪಡಿಯಾರ, ವೆಂಕಟೇಶ ನಾಯ್ಕ ಮುಟ್ಟಳ್ಳಿ, ಶಂಕರ ಶೆಟ್ಟಿ, ಉಮೇಶ ಶೇಠ್ ಸೇರಿದಂತೆ ಸಮಿತಿಯ ಸದಸ್ಯರು ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.