ಭಟ್ಕಳ: ಮುಸ್ಲಿಂ ಧರ್ಮೀಯರ ಪವಿತ್ರ ಈದ್ ಉಲ್ ಫಿತ್ರ್ ಹಬ್ಬವನ್ನ ಭಟ್ಕಳದಲ್ಲಿ ಸಂಭ್ರಮ - ಸಡಗರದಿಂದ ಆಚರಿಸಲಾಯಿತು. ಒಂದು ತಿಂಗಳುಗಳ ಕಾಲ ನಡೆಯುವ ಪವಿತ್ರ ರಂಜಾನ್ ಮಾಸದ ಉಪವಾಸ ಆಚರಣೆಯ ಬಳಿಕ ಭಾನುವಾರ ರಾತ್ರಿ ಚಂದ್ರ ದರ್ಶನವಾದ ಕಾರಣ ಭಟ್ಕಳದಲ್ಲಿ ಇಂದು ಹಬ್ಬ ಆಚರಿಸಲಾಗಿದೆ. ಪ್ರತಿವರ್ಷ ಅರಬ್ ರಾಷ್ಟ್ರಗಳಲ್ಲಿ ಚಂದಿರನ ದರ್ಶನವಾದ ಬಳಿಕ ಭಟ್ಕಳದಲ್ಲಿ ಹಬ್ಬ ಆಚರಿಸಲಾಗುತ್ತದೆ. ಉಳಿದ ತಾಲೂಕು ಅಥವಾ ಕರ್ನಾಟಕದಲ್ಲಿ ಭಟ್ಕಳದಲ್ಲಿ ಹಬ್ಬವಾದ ಮಾರನೇ ದಿನ ಹಬ್ಬವನ್ನಾಚರಿಸಲಾಗುತ್ತದೆ.
ಭಟ್ಕಳದಲ್ಲಿಂದು ಹಬ್ಬದ ಪ್ರಯುಕ್ತ ಮುಸ್ಲಿಮರಿಂದ ವಿಶೇಷವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಪ್ರಾರ್ಥನೆಗೂ ಮುನ್ನ ಪಟ್ಟಣದ ಜಾಮಿಯಾ ಮಸೀದಿಯಿಂದ ಜಮಾತ್ ಉಲ್ ಮುಸ್ಲಿಮೀನ್ ನ ಖಾಜಿ ಮೌಲಾನಾ ಅಬ್ರಹಾಂ ನದ್ವಿ, ಜಾಮಿಯಾ ಮಸೀದಿಯ ಮೌಲಾನಾ ಅಬ್ದುಲ್ ಅಲೀಂ ನದ್ವಿ, ಮರ್ಕಜ್ ಖಲೀಫಾ ಜಮಾತ್ ಉಲ್ ಮುಸ್ಲಿಮೀನ್ ಮುಖ್ಯ ಖಾಜಿ ಮೌಲಾನಾ ಖಾಜಾ ಮದನಿ ಅವರನ್ನು ಮೆರವಣಿಗೆಯಲ್ಲಿ ಈದ್ಗಾ ಮೈದಾನಕ್ಕೆ ಕರೆತರಲಾಯಿತು.
ಮೈದಾನದಲ್ಲಿ ಸಾವಿರಾರು ಜನ ಮುಸ್ಲಿಮರು ಸೇರಿ ಮೂವರೂ ಖಾಜಿಗಳ ನೇತೃತ್ವದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ನೆರವೇರಿಸಿದರು. ಬಳಿಕ ಒಬ್ಬರಿಗೊಬ್ಬರು ಆಲಿಂಗನ ಮಾಡಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ಸಿಹಿ ತಿನಿಸುಗಳನ್ನ ನೆರೆಹೊರೆಯವರು, ಕುಟುಂಬಸ್ಥರೊಂದಿಗೆ ಹಂಚಿಕೊಂಡು ಸಂಭ್ರಮಿಸಿದರು.