ಕಾರವಾರ: ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್ ಹಫ್ತಾ ವಸೂಲಿ ಮಾಡುತ್ತಾರೆಂದು ನಮ್ಮ ವಿರುದ್ಧ ಹೇಳಿಕೆ ನೀಡಿರುವುದು ಖಂಡನಾರ್ಹ ಎಂದು ಮಕ್ಕಳ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕ ಹೇಳಿದರು.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಡಾ. ಶಿವಾನಂದ ಕುಡ್ತಲಕರ್ ವಿರುದ್ಧ ದೂರು ದಾಖಲಿಸಲಾಗಿದ್ದು, ಮಾನನಷ್ಟ ಮೊಕದ್ದಮೆಯನ್ನೂ ಹೂಡುತ್ತೇವೆ ಎಂದು ತಿಳಿಸಿದರು. ಬಾಣಂತಿ ಸಾವಿನ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕುಡ್ತಲಕರ್ ವಿರುದ್ಧ ಈಗಾಗಲೇ ಶಸ್ತ್ರಚಿಕಿತ್ಸೆಯ ವೇಳೆ ನಿರ್ಲಕ್ಷ್ಯ ತೋರಿದ ಬಗ್ಗೆ ಎಫ್ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ಕೂಡ ನಡೆಯುತ್ತಿದೆ.ಆದರೆ ಈ ಸಂದರ್ಭ ಸಾಮಾಜಿಕ ಹೋರಾಟಗಾರರಾದ ನಮ್ಮ ಮೇಲೆ ಹಫ್ತಾ ವಸೂಲಿ ಹಾಗೂ ಆಸ್ಪತ್ರೆಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಾರೆಂಬ ಆರೋಪ ಮಾಡಿ ಪತ್ರಿಕೆ ಹೇಳಿಕೆ ನೀಡಿದ್ದಾರೆ.
ಬಾಣಂತಿ ಸಾವನ್ನಪ್ಪಲು ಅವರು ಅನಸ್ತೇಶಿಯಾ ಕೊಟ್ಟಿರುವುದೇ ಕಾರಣ ಎಂದು ಈಗಾಗಲೇ ಆರೋಪಿಸಲಾಗಿದೆ. ಆದರೆ, ಅವರು ಆರೋಪದಿಂದ ತಪ್ಪಿಸಿಕೊಳ್ಳಲು ಒಟಿ ಆಪರೇಟರ್ ಮೇಲೆ ತಾನೇ ಅನಸ್ತೇಶಿಯಾ ಕೊಟ್ಟಿರುವುದಾಗಿ ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿರುವುದು ಕೂಡ ಜಗಜ್ಜಾಹೀರಾಗಿದೆ.
ಹೀಗಿರುವಾಗ ಯಾವ ಆಧಾರದಲ್ಲಿ ಅವರು ನಮ್ಮ ಮೇಲೆ ಆರೋಪಿಸುತ್ತಾರೆ. ನಾವು ಹಫ್ತಾ ವಸೂಲಿ ಮಾಡಿದ ಬಗ್ಗೆ ಅವರ ಬಳಿ ದಾಖಲೆಗಳಿವೆಯೇ? ದಾಖಲೆಗಳಿದ್ದರೆ ಬಹಿರಂಗಗೊಳಿಸಲಿ ಎಂದು ಸವಾಲೆಸೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ರಾಹುಲ್ ನಾಯ್ಕ ಹಾಗೂ ವಿಲ್ಸನ್ ಫರ್ನಾಂಡೀಸ್ ಇದ್ದರು.