ಶಿರಸಿ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧಗಳನ್ನು ವಿಧಿಸಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಾಖೆಯ ಮೇಲೂ ಪರಿಣಾಮ ಬೀರಿದ್ದು, ಶಾಖೆಯಲ್ಲಿ ವ್ಯವಹರಿಸುತ್ತಿರುವ ಸುಮಾರು 4 ಸಾವಿರಕ್ಕೂ ಅಧಿಕ ಗ್ರಾಹಕರಲ್ಲಿ ಆತಂಕ ಮೂಡಿದೆ.
ಆರ್‌ಬಿಐ ಸೂಚನೆಯ ಪ್ರಕಾರ, ಯಾವುದೇ ಉಳಿತಾಯ, ಚಾಲ್ತಿ ಖಾತೆ ಮತ್ತು ಇತರೆ ಠೇವಣಿ ಖಾತೆಗಳಿಂದ ಗ್ರಾಹಕರು ಗರಿಷ್ಠ 1 ಸಾವಿರ ರೂಪಾಯಿ ಮಾತ್ರ ವಿತ್ ಡ್ರಾ ಮಾಡಬುಹುದಾಗಿದೆ. ಇದರಿಂದ ಶಿರಸಿಯ ಬ್ರಾಂಚ್ ಸುಮಾರು 85 ಕೋಟಿ ಠೇವಣಿ ಹೊಂದಿದ್ದು, ಠೇವಣಿದಾರರಲ್ಲಿ ಅಭದ್ರತೆ ಕಾಡುತ್ತಿದೆ.
ಶಿರಸಿ ಬ್ಯಾಂಕ್ ವಿಲೀನ: 13-7-2010ರಲ್ಲಿ ಶಿರಸಿಯ ಚೇತನಾ ಸಹಕಾರಿ ಬ್ಯಾಂಕ್ ಪಿಎಮ್ಸಿಯೊಂದಿಗೆ ಮರ್ಜ್ ಆಗಿತ್ತು. ಪಿಎಮ್ಸಿ 1984ರಲ್ಲಿ ಮುಂಬೈನಲ್ಲಿ ಸ್ಥಾಪನೆಯಾದ ಸಹಕಾರಿ ಬ್ಯಾಂಕ್ ಆಗಿದ್ದು, ಈಗ ಆರು ರಾಜ್ಯಗಳಲ್ಲಿ ಒಟ್ಟು 137 ಶಾಖೆಗಳನ್ನು ಹೊಂದಿದೆ ಮತ್ತು ದೇಶದ ಟಾಪ್ 10 ಸಹಕಾರಿ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಹಲವಾರು ಸಹಕಾರಿ ಬ್ಯಾಂಕ್ ಗಳು ಮರ್ಜ್ ಆಗಿದ್ದು, ಶಿರಸಿಯ ಪ್ರಖ್ಯಾತ ಬ್ಯಾಂಕ್ ಆಗಿದ್ದ ಚೇತನಾ ಸಹಕಾರಿ ಬ್ಯಾಂಕ್ ಸಹ ವಿಲೀನಗೊಂಡಿತ್ತು.
ಗ್ರಾಹಕರಿಗೆ ಮಾಹಿತಿ: ಆರ್‌ಬಿಐ ನಿರ್ದೇಶನ ಹೊರ ಬೀಳುತ್ತಿದ್ದಂತೆ ಪಿಎಮ್ಸಿ ಮುಖ್ಯ ಕಚೇರಿಯಿಂದ ದೇಶದಲ್ಲಿರುವ ಎಲ್ಲಾ ಶಾಖೆಗಳ ಗ್ರಾಹಕರಿಗೆ ಭಯ ಪಡುವ ಅಗತ್ಯವಿಲ್ಲ ಹಾಗೂ ಠೇವಣಿಗಳಿಗೆ ಅಭದ್ರತೆಯಿಲ್ಲ ಎಂಬ ಮಾಹಿತಿಯುಳ್ಳ ಸಂದೇಶವನ್ನು ಮೊಬೈಲ್ ಮುಖಾಂತರ ಕಳಿಸಲಾಗಿದೆ.
ಶಾಖೆಗೆ ಭೇಟಿ: ಶಿರಸಿಯ ಸಿ ಪಿ ಬಜಾರದಲ್ಲಿರುವ ಪಿಎಮ್ಸಿ ಶಾಖೆಗೆ ಗ್ರಾಹಕರು ಭೇಟಿ ನೀಡಿ, ತಮ್ಮ ಠೇವಣಿ ಹಾಗೂ ಉಳಿತಾಯ ಖಾತೆಯ ಹಣದ ಭದ್ರತೆ ಕುರಿತು ಸಿಬ್ಬಂದಿಯೊಂದಿಗೆ ಚರ್ಚಿಸಿದ್ದಾರೆ. ಶಿರಸಿ ಶಾಖೆಯ ಮುಖ್ಯ ಕಾರ್ಯನಿರ್ವಾಹಕರ ಜೊತೆ ಮಾತನಾಡಿ ತಮ್ಮ ಹಣ ಸುರಕ್ಷಿತವಾಗಿದೆಯೇ ಎಂದು ಖಾತ್ರಿ ಪಡಿಸಿಕೊಳ್ಳುತ್ತಿದ್ದಾರೆ.