ಕಾರವಾರ (ಉ.ಕ): : ಕೆಲವು ದಿನಗಳ ಹಿಂದೆ ಅಬ್ಬರಿಸಿದ್ದ ಮಳೆ ಸದ್ಯ ತಣ್ಣಗಾಗಿದೆ. ಆದರೆ, ಮಳೆಯ ಆರ್ಭಟಕ್ಕೆ ರಾಜ್ಯ ಹೆದ್ದಾರಿಯಲ್ಲಿ ಉಂಟಾಗಿರುವ ಹಾನಿ ಜನಸಾಮಾನ್ಯರ ಬದುಕಿಗೆ ಕಂಟಕವಾಗಿತ್ತು. ಅಣಿಶಿ ಗುಡ್ಡ ಕುಸಿತದ ಪರಿಣಾಮ ಜಿಲ್ಲಾ ಕೇಂದ್ರದ ಸಂಪರ್ಕವನ್ನೇ ಕಳೆದುಕೊಂಡಿದ್ದವು.
ಗುಡ್ಡ ತೆರವುಗೊಳಿಸುವಂತೆ ಸ್ಥಳೀಯರು ಹತ್ತಾರು ಬಾರಿ ಮನವಿ ಮಾಡಿದ್ದರೂ ಸಹ ಅಧಿಕಾರಿಗಳು ಮಾತ್ರ ಗುಡ್ಡ ಇನ್ನಷ್ಟು ಕುಸಿಯುವ ಭೀತಿಯ ಕಥೆ ಹೇಳುತ್ತಾ ದಿನ ದೂಡತೊಡಗಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜನರೇ ತಾತ್ಕಾಲಿಕ ದಾರಿ ಮಾಡಿಕೊಂಡಿದ್ದಾರೆ.
ಭಾರೀ ಮಳೆಯಿಂದಾಗಿ ಕಾರವಾರ-ಬೆಳಗಾವಿ ಸಂಪರ್ಕಿಸುವ ಸದಾಶಿವಗಡ ಔರಾದ್ ರಾಜ್ಯ ಹೆದ್ದಾರಿಯ ಅಣಶಿ ಘಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿತ್ತು. ಹೆದ್ದಾರಿ ಸಹಿತವಾಗಿ ನೂರಾರು ಅಡಿಗಳ ಆಳಕ್ಕೆ ಭೂಮಿ ಕುಸಿದ ಪರಿಣಾಮ ಜೋಯಿಡಾ, ದಾಂಡೇಲಿ ಹಾಗೂ ಹಳಿಯಾಳ ತಾಲೂಕುಗಳ ಸಂಪರ್ಕವೇ ಬಂದ್ ಆಗಿತ್ತು.
ನಡೆದಾಡಲು ಕಾಲುದಾರಿ ಸಹ ಇಲ್ಲದೆ ಜನರು ಸಂಕಷ್ಟ ಎದುರಿಸಿದ್ದರು. ಈ ಹಿನ್ನೆಲೆ ವಿವಿಧ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯ ಸುಮಾರು 50ಕ್ಕೂ ಹೆಚ್ಚು ಮಂದಿ ಒಟ್ಟಾಗಿ ಗುಡ್ಡ ತೆರವು ಕಾರ್ಯ ಮಾಡಿ ಓಡಾಡಲು ಮಾರ್ಗ ಕಂಡುಕೊಂಡಿದ್ದಾರೆ.
ಈ ಮೊದಲು ಜಿಲ್ಲಾ ಕೇಂದ್ರಕ್ಕೆ ಆಗಮಿಸಬೇಕೆಂದರೆ ಹತ್ತಾರು ಕಿ.ಮೀ ದೂರ ಸುತ್ತಾಡಿ ಬರಬೇಕಿತ್ತು. ಇದರಿಂದ ಬೇಸತ್ತಿದ್ದ ಗ್ರಾಮಸ್ಥರು ತಾವಾಗಿಯೇ ಗುಡ್ಡ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಇತ್ತ ಗುಡ್ಡ ತೆರವು ಕಾರ್ಯಾಚರಣೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗುಡ್ಡ ಕುಸಿತದ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಮುಂಬರುವ ದಿನದಲ್ಲಿ ಶಾಶ್ವತ ಪರಿಹಾರ ಕಾಮಗಾರಿ ನಡೆಸುವುದಾಗಿಯೂ ತಿಳಿಸಿದ್ದಾರೆ.