ಶಿರಸಿ: ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆಯಿತು.
ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಪರ ಲೋಕಾಯುಕ್ತ ಎಸ್ಪಿ ಅರವಿಂದ ಕಲಗುಚ್ಚಿ ಮಾತನಾಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸೋದಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದಿಂದ ದೊರೆಯುವ ಸವಲತ್ತುಗಳು ಸಾರ್ವಜನಿಕರಿಗೆ ತಲುಪಿಸುವ ಹಂತದಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ನೀಡಬಹುದಾಗಿದೆ. ಸಾರ್ವಜನಿಕರಿಂದ ಸುಮಾರು ಏಳು ಅರ್ಜಿಗಳನ್ನ ಸ್ವೀಕರಿಸಿದ್ದೇವೆ. ಅದರಲ್ಲಿ ಆರು ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸಮಯದ ಮಿತಿಯಲ್ಲಿ ಪರಿಹರಿಸುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಅರ್ಜಿಗಳನ್ನು ಲೋಕಾಯುಕ್ತರ ಮಟ್ಟದಲ್ಲಿ ಪರಿಹರಿಸಿ ಕೊಡಬೇಕಾಗುತ್ತದೆ ಎಂದರು.
ಲೋಕಾಯುಕ್ತದ ವ್ಯಾಪ್ತಿಯಲ್ಲಿ ಸರ್ಕಾರಿ ಇಲಾಖೆಗಳಲ್ಲದೆ, ಸರ್ಕಾರದಿಂದ ಗೌರವಧನ ಪಡೆಯುವ ಸಂಸ್ಥೆಗಳು ಬರುತ್ತವೆ. ಆದ್ದರಿಂದ ಸಾರ್ವಜನಿಕರಿಗೆ ಮೇಲೆ ತಿಳಿಸಿದ ಯಾವುದೇ ಮೂಲಗಳಿಂದ ತೊಂದರೆಯಾದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಬಹುದಾಗಿದೆ. ಲೋಕಾಯುಕ್ತಕ್ಕೆ ಒಂದು ಸಾರಿ ದೂರು ನೀಡಿದ ಬಳಿಕ ಯಾವುದೇ ಕಾರಣಕ್ಕೂ ದೂರನ್ನು ಹಿಂಪಡೆಯುವುದು ಅಸಾಧ್ಯ ಎಂದರು.