ಶಿರಸಿ: ಸಾರ್ವಜನಿಕರು ಹಾಗೂ ಆಡಳಿತದ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯನ್ನು ಇಬ್ಬಾಗ ಮಾಡಿ ಶಿರಸಿ ಜಿಲ್ಲೆ ಹಾಗೂ ಬನವಾಸಿ ತಾಲೂಕು ರಚನೆ ಮಾಡಬೇಕು ಎಂದು ಆಗ್ರಹಿಸಿ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿ ಎದುರು ಜಮಾಯಿಸಿದ ಹೋರಾಟ ಸಮಿತಿಯ ಕಾರ್ಯಕರ್ತರು, ಈ ಅಧಿವೇಶನದಲ್ಲಿಯೇ ಸಭಾಧ್ಯಕ್ಷರು ಜಿಲ್ಲೆ ರಚನೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿ, ಸ್ಪೀಕರ್ ಆಪ್ತ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಉತ್ತರ ಕನ್ನಡ ವಿಸ್ತಾರವಾಗಿದ್ದು, 12 ಕಂದಾಯ ತಾಲೂಕುಗಳನ್ನು ಹಾಗೂ 4 ಕಂದಾಯ ಉಪ ವಿಭಾಗಗಳನ್ನು ಒಳಗೊಂಡಿದೆ. ಕೆಲವೊಂದು ಪ್ರದೇಶಗಳು ಜಿಲ್ಲಾ ಕೇಂದ್ರದಿಂದ 200 ಕಿ.ಮೀ. ಅಂತರದಲ್ಲಿವೆ. ಇದು ಎಲ್ಲರಿಗೂ ಸಮಸ್ಯೆಯಾಗಿದ್ದು, ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಘಟ್ಟದ ಮೇಲಿನ 7 ತಾಲೂಕು ಸೇರಿ ಶಿರಸಿ ಜಿಲ್ಲೆ ರಚನೆ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಕನ್ನಡದ ಮೊದಲ ರಾಜಧಾನಿ ಬನವಾಸಿಯನ್ನು ತಾಲೂಕಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.