ಕಾರವಾರ: ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಕುಮುಟಾ ತಾಲೂಕಿನ ದಿವಗಿ ಬಳಿ ಕರ್ನಾಟಕ ಸ್ವಾಭಿಮಾನಿ ಬಳಗದ ನೇತೃತ್ವದಲ್ಲಿ ನೂರಾನು ಜನರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ 66 ಹಾಗೂ ರಾಜ್ಯ ಹೆದ್ದಾರಿ 69 ಎರಡು ಹೆದ್ದಾರಿಗಳು ಕೂಡುವ ದಿವಗಿ ಬಳಿ ಅವೈಜ್ಞಾನಿಕವಾಗಿ ಸರ್ಕಲ್ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಈಗಾಗಲೇ ಸಾಕಷ್ಟು ಅಪಘಾತಗಳು ಸಂಭವಿಸಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಅಂಡರ್ ಪಾಸ್ ಇಲ್ಲವೇ ಮೇಲ್ಸೇತುವೆ ನಿರ್ಮಾಣ ಮಾಡಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಗುತ್ತಿಗೆ ಪಡೆದ ಐಆರ್ಬಿ ಕಂಪನಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ-ಶಾಸಕರೊಂದಿಗಿನ ಸಿಎಂ ಸಮಾಲೋಚನಾ ಸಭೆ ಮುಕ್ತಾಯ: ಸಂಜೆ ಡಿಸಿಎಂಗಳ ಜಂಟಿ ಸುದ್ದಿಗೋಷ್ಠಿ
ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಆರು ವರ್ಷಗಳಿಂದ ನಡೆಯುತ್ತಿದ್ದು, ಈವರೆಗೂ ಮುಕ್ತಾಯವಾಗಿಲ್ಲ. ಹೆದ್ದಾರಿಯುದ್ದಕ್ಕೂ ಸಾಕಷ್ಟು ಅವೈಜ್ಞಾನಿಕ ಕಾಮಗಾರಿ ಹಾಗೂ ಅರೆಬರೆ ಕೆಲಸಗಳಿಂದಾಗಿ ಪದೇ ಪದೆ ಅಪಘಾತಗಳು ಸಂಭವಿಸುತ್ತಿವೆ. ಅಧಿಕಾರಿಗಳು ಹಾಗೂ ಕಂಪನಿಯ ದಿವ್ಯ ನಿರ್ಲಕ್ಷ್ಯದಿಂದಾಗಿ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.