ಕಾರವಾರ: ಕಡಲಂಚಿನ ಮೀನುಗಾರರು ಸೇರಿದಂತೆ ಸಾರ್ವಜನಿಕರ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿರುವ ಸಿಆರ್ಜೆಡ್ ಕಾನೂನನ್ನು ಕೂಡಲೇ ರದ್ದುಗೊಳಿಸಬೇಕು ಮತ್ತು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕಾರವಾರ ಮೀನುಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಕಾರವಾರ ತಾಲೂಕಿನ ವಿವಿಧ ಭಾಗದ ಯಾಂತ್ರೀಕೃತ ಮತ್ತು ಸಾಂಪ್ರದಾಯಿಕ ಮೀನುಗಾರರು ಒಂದು ದಿನದ ಮೀನುಗಾರಿಕೆಯನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಿದ್ದುಪಡಿಯಾದ ಸಿಆರ್ಜೆಡ್ ನಿಯಮದಿಂದಾಗಿ ಮೀನುಗಾರರಿಗೆ ತೊಂದರೆಯಾಗುತ್ತಿದೆ. ಕಡಲಂಚಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಕಾರವಾರದಲ್ಲಿ ಎರಡನೇ ಹಂತದಲ್ಲಿ ವಾಣಿಜ್ಯ ಬಂದರನ್ನು ವಿಸ್ತರಣೆ ಮಾಡುತ್ತಿದ್ದು, ಇದರಿಂದ ಇದ್ದ ಒಂದು ಕಡಲತೀರ ಕೂಡ ಮಾಯವಾಗುವ ಆತಂಕ ಎದುರಾಗಿದೆ. ಒಂದೊಮ್ಮೆ ಇದು ವಿಸ್ತರಣೆಯಾದಲ್ಲಿ ಮೀನುಗಾರಿಕೆ ಮಾಡಲಾಗಿದೆ. ಇದರಿಂದ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರತಿಭಟನಾಕಾರರಿಂದ ಮನವಿ ಸ್ವಿಕರಿಸಿದರು.