ಕಾರವಾರ: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ 5 ಸಾವಿರ ರೂ. ಪರಿಹಾರ ಹಣ ನೀಡುತ್ತಿದ್ದು, ಸೇವಾ ಸಿಂಧು ವೆಬ್ಸೈಟ್ ಸಮಸ್ಯೆಯಿಂದಾಗಿ ಕಾರವಾರದ ಆಟೋ, ಟ್ಯಾಕ್ಸಿ ಚಾಲಕರ ಕೈಗೆ ಈ ಹಣ ಸೇರದಂತಾಗಿದೆ.
ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ ಸೇವಾ ಸಿಂಧು ವೆಬ್ಸೈಟ್ನ ತಾಂತ್ರಿಕ ಸಮಸ್ಯೆಯಿಂದಾಗಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಣೆ ಮಾಡಿದ್ದ ಪರಿಹಾರದ ಹಣ ಕೈಗೆ ಸೇರದಂತಾಗಿದೆ. ಅಧಿಕೃತವಾಗಿ ನೋಂದಣಿ ಹೊಂದಿದ ವಾಹನಗಳ ಚಾಲಕರು ಅರ್ಜಿ ಸಲ್ಲಿಸಲು ಮುಂದಾದರೆ ವೆಬ್ಸೈಟ್ನಲ್ಲಿ ನೋಂದಣಿ ವ್ಯಾಲಿಡಿಟಿ ಮುಗಿದಿದೆ ಎಂದು ಬರುತ್ತಿದೆ.
ಈ ಬಗ್ಗೆ ಆರ್ಟಿಒ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಯಾವುದೇ ಸಮರ್ಪಕ ಉತ್ತರ ನೀಡುತ್ತಿಲ್ಲವಂತೆ. ದೆಹಲಿಯಲ್ಲಾದ ಸಮಸ್ಯೆ ಅಲ್ಲಿಯೇ ಬಗೆಹರಿಸಬೇಕು ಎಂಬಿತ್ಯಾದಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಚಾಲಕರು ಆರೋಪಿಸಿದ್ದಾರೆ.
ಇದು ಸರ್ಕಾರ ಘೋಷಣೆ ಮಾಡಿದ ಪರಿಹಾರ ಹಣಕ್ಕೆ ಮಾತ್ರ ಸಮಸ್ಯೆಯಾಗಿರದೆ ಆಕಸ್ಮಿಕವಾಗಿ ಸಂಭವಿಸುವ ಅಪಘಾತದಲ್ಲಿ ಇನ್ಸೂರೆನ್ಸ್ ಪಡೆಯುವಾಗಲೂ ಸಹ ಇಂತಹ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ ಎಂದು ಆಟೋ, ಟ್ಯಾಕ್ಸಿ ಚಾಲಕರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಇತ್ಯರ್ಥ ಮಾಡುವಂತೆ ಆಟೋ ಮತ್ತು ಟ್ಯಾಕ್ಸಿ ಚಾಲಕರು ಒತ್ತಾಯಿಸಿದ್ದಾರೆ.