ಶಿರಸಿ: ಕಳೆದ ಒಂದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದ್ದು, ಶಿರಸಿ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಕ್ರಮವಾಗಿ ಹಿಂದುಳಿದ ವರ್ಗ ಮತ್ತು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.
2018ರ ಸೆಪ್ಟೆಂಬರ್ನಲ್ಲಿಯೇ ಸ್ಥಳೀಯ ಸಂಸ್ಥೆಗೆ ಚುನಾವಣೆ ನಡೆದಿದ್ದರೂ ಮೀಸಲಾತಿ ಸಂಬಂಧ ಗೊಂದಲ ಏರ್ಪಟ್ಟಿತ್ತು. ರಾಜ್ಯ ಸರ್ಕಾರದ ಮೀಸಲಾತಿ ಪ್ರಶ್ನಿಸಿ ಕೆಲ ಮುಖಂಡರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದ ಪರಿಣಾಮ ಆಯ್ಕೆ ಪ್ರಕ್ರಿಯೆ ವಿಳಂಬವಾಗಿತ್ತು.
ಆದರೆ ಈಗ ನ್ಯಾಯಾಲಯದಲ್ಲಿ ಪ್ರಕರಣ ಮುಗಿದಿದ್ದು, ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ದಾಂಡೇಲಿ, ಕಾರವಾರ ನಗರಸಭೆಗಳಿಗೆ ಮೀಸಲಾತಿ ನಿಗದಿ ಪಡಿಸಿದೆ.
ಶಿರಸಿ ನಗರಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರಕಿದ್ದು, ದಾಂಡೇಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ. ಆದರೆ ಕಾರವಾರ ನಗರಸಭೆ ಅತಂತ್ರವಾಗಿದ್ದು, ಯಾರಿಗೆ ಅಧಿಕಾರ ಸಿಗಲಿದೆ ಎನ್ನುವುದು ಕುತೂಹಲದ ವಿಷಯವಾಗಿದೆ.