ಕಾರವಾರ: ಕಳೆದ ನಾಲ್ಕೈದು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕುಂಟುತ್ತಲೇ ಸಾಗಿದೆ. ಹೆದ್ದಾರಿ ಅಗಲೀಕರಣದ ವೇಳೆ ನಡೆಸಿದ ಅವೈಜ್ಞಾನಿಕ ಗುಡ್ಡ ತೆರವಿನ ಕಾಮಗಾರಿಗಳು ಇನ್ನೇನು ಕೆಲ ದಿನಗಳಲ್ಲಿ ಆರಂಭವಾಗುವ ಮಳೆಗಾಲದಲ್ಲಿ ಓಡಾಡುವ ಪ್ರಯಾಣಿಕರ ಹಾಗೂ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷ ಮಳೆಗಾಲದಲ್ಲಿ ರಾಜ್ಯದ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಅದರಲ್ಲೂ ಗುಡ್ಡ ಕುಸಿತದಿಂದಾಗಿ ಸಾಕಷ್ಟು ಹಾನಿ ಉಂಟಾಗಿದ್ದು, ಸಾವು ನೋವು ಸಂಭವಿಸಿದ್ವು. ಇಂತಹುದೇ ಆತಂಕದ ಪರಿಸ್ಥಿತಿ ಇದೀಗ ಉತ್ತರಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಎದುರಾಗಿದೆ.
ಜಿಲ್ಲೆಯ ಭಟ್ಕಳದಿಂದ ಕಾರವಾರದ ಗೋವಾ ಗಡಿಯವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ನಡೆಯುತ್ತಿದೆ. ರಸ್ತೆ ಅಗಲೀಕರಣಕ್ಕಾಗಿ ಬೃಹತ್ ಗುಡ್ಡಗಳನ್ನು ತೆರವು ಮಾಡುವ ಕಾರ್ಯ ಸಾಗಿದೆ. ಆದರೆ, ಕಾರವಾರ ತಾಲೂಕಿನ ಬಿಣಗಾ, ಅರಗಾ, ಕುಮಟಾದ ಬರ್ಗಿ, ತಂಡ್ರಕುಳಿ ಹೊನ್ನಾವರ ಬಳಿ ತೆರವು ಮಾಡುತ್ತಿರುವ ಗುಡ್ಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ರಸ್ತೆ ಅಗಲೀಕರಣಕ್ಕಾಗಿ ಅರ್ಧ ಗುಡ್ಡವನ್ನೇ ಕತ್ತರಿಸಲಾಗಿದ್ದು ಹಾಗೇ ಬಿಡಲಾಗಿದೆ. ಸದ್ಯ ಅಲ್ಲಲ್ಲಿ ತೆರವು ಮಾಡಿರುವ ಗುಡ್ಡದಲ್ಲಿ ಮಣ್ಣು ಕುಸಿಯುತ್ತಿದೆ. ಮಳೆಗಾಲ ಆರಂಭವಾದ್ರೆ ಅಧಿಕ ಕುಸಿತ ಎದುರಾಗುವ ಆತಂಕ ಇದೀಗ ನಿತ್ಯ ಓಡಾಡುವ ಪ್ರಯಾಣಿಕರೂ ಸೇರಿದಂತೆ ಸ್ಥಳೀಯರನ್ನು ಕಾಡುತ್ತಿದೆ.
ಕಳೆದ ಎರಡು ವರ್ಷದ ಹಿಂದೆ ಜಿಲ್ಲೆಯ ಕುಮಟಾ ತಾಲೂಕಿನ ತಂಡ್ರುಕುಳಿ ಗುಡ್ಡ ಕುಸಿತ ಸಂಭವಿಸಿ ಮೂವರು ಮಕ್ಕಳು ಮೃತಪಟ್ಟಿದ್ದರು. ಇದಾದ ನಂತರ ಕೆಲವೆಡೆ ಗುಡ್ಡ ಕುಸಿಯದಂತೆ ಸಿಮೆಂಟ್ ಹಾಕಿದ್ದು, ಇನ್ನೂ ಕೆಲವೆಡೆ ಹಾಗೇ ಬಿಡಲಾಗಿದೆ. ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಮಾತ್ರ ಗುಡ್ಡ ಕುಸಿಯದಂತೆ ಕ್ರಮ ಕೈಗೊಂಡಿದ್ದು, ಕಾರವಾರ ತಾಲೂಕಿನಲ್ಲಿ ಗುಡ್ಡ ಕೊರೆದಿರುವ ಕಡೆ ಕುಸಿಯುವುದನ್ನು ತಡೆಯುವಂತೆ ಯಾವುದೇ ಕ್ರಮ ಕೈಗೊಂಡಿಲ್ಲ.
ಅಲ್ಲದೆ ಅವೈಜ್ಞಾನಿಕವಾಗಿ ಕಡಿದಾದ ರೀತಿಯಲ್ಲಿ ಗುಡ್ಡ ಕೊರೆದಿದ್ದು ಎಲ್ಲಿ ಕುಸಿಯುವುದೋ ಎನ್ನುವ ಆತಂಕ ಇದೀಗ ಸಾರ್ವಜನಿಕರನ್ನು ಕಾಡತೊಡಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಬಳಿ ಕೇಳಿದರೆ, ನಾವು ಗುಡ್ಡ ಕುಸಿದು ಅಪಾಯ ಆಗದಂತೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಐಆರ್ಬಿ ಯವರಿಗೂ ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ.
ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅತ್ಯಧಿಕ ಮಳೆಯಾಗುತ್ತದೆ. ಸದ್ಯ ಎಲ್ಲೆಡೆ ಕಾಮಗಾರಿ ನಡೆಯುತ್ತಿದ್ದು, ಜೂನ್ ಮೊದಲ ವಾರದಲ್ಲಿಯೇ ಮಾನ್ಸೂನ್ ಶುರುವಾಗಲಿದೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ.