ಕಾರವಾರ: ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವೇಳೆ ಮೃತಪಟ್ಟಿದ್ದ ಬಾಣಂತಿ ಗೀತಾ ಬಾನಾವಳಿ ಕುಟುಂಬಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿ ಸ್ಥಳೀಯ ಮೀನುಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಓದಿ: ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ಆರೋಪ ಪ್ರಕರಣ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಜಿಲ್ಲಾ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಸರ್ವೋದಯನಗರದ ಗೀತಾ ಬಾನವಳಿ ಮೃತಪಟ್ಟಿದ್ದರು. ಈ ವೇಳೆ ಅವರ ಸಾವಿಗೆ ಸರ್ಜನ್ ಡಾ. ಶಿವಾನಂದ ಕುಡ್ತರಕರ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿತ್ತು. ನಂತರದಲ್ಲಿ ಅಂದಿನ ಸಿಇಒ ನೇತೃತ್ವದ ಸಮಿತಿ ತನಿಖೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಕೂಡ ಸಲ್ಲಿಸಿತ್ತು. ಪೊಲೀಸ್ ದೂರು ಕೂಡ ದಾಖಲಾಗಿ ಸರ್ಜನ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು.
ಆದರೆ ಈವರೆಗೂ ಈ ಪ್ರಕರಣದಲ್ಲಿ ಗೀತಾ ಸಾವಿಗೆ ಕಾರಣವೇನು ಎಂಬ ಬಗ್ಗೆ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಅಲ್ಲದೇ ಪೊಲೀಸ್ ತನಿಖೆ ಏನಾಯಿತು ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಆದರೆ ಸರ್ಜನ್ ಅವರನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಅಲ್ಲದೆ ಬಾಣಂತಿ ಗೀತಾ ಸಾವಿಗೀಡಾಗಿ 6 ತಿಂಗಳು ಕಳೆದರು ಈವರೆಗೂ ಮರಣೋತ್ತರ ಪರೀಕ್ಷೆ ವರದಿ ಬಹಿರಂಗಗೊಂಡಿಲ್ಲ. ಹೇಗೆ ಸತ್ತಿದ್ದಾಳೆ ಎಂಬುದನ್ನು ತನಿಖಾ ಸಮಿತಿ ಬಹಿರಂಗಗೊಳಿಸಿಲ್ಲ. ಹೀಗಾಗಿ ಅಧಿಕಾರಿಗಳು ಪ್ರಕರಣದ ಕುರಿತು ಸ್ಪಷ್ಟನೆ ನೀಡುವವರೆಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರೆಸುವುದಾಗಿ ಮೀನುಗಾರರು ತಿಳಿಸಿದ್ದಾರೆ.